ದಿ ಸಿಕಿಯೊಂಗ್ ಅಥವಾ ಟಿಬೆಟ್‌ನ ದೇಶಾಂತರ ಸರ್ಕಾರದ ರಾಜಕೀಯ ಮುಖ್ಯಸ್ಥ ಪೆನ್ಪಾ ಸೆರಿಂಗ್ ಅವರು ಅನೌಪಚಾರಿಕ ಮಾತುಕತೆಗಳು ನಡೆಯುತ್ತಿರುವುದನ್ನು ದೃಢಪಡಿಸಿದರು. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಸಂಧಾನಕಾರರು ಮಾತುಕತೆಯಲ್ಲಿ ತೊಡಗಿದ್ದಾರೆ. ಆದರೆ, ಇದು ತಕ್ಷಣಕ್ಕೆ ಫಲಿತಾಂಶ ನೀಡುತ್ತದೆ ಎನ್ನುವ ನಿರೀಕ್ಷೆ ಇಲ್ಲ ಎಂದು ಹೇಳಿದ್ದಾರೆ.
'ನಾವು ಕಳೆದ ವರ್ಷದಿಂದ ಅನೌಪಚಾರಿಕ ಮಾತುಕತೆಯಲ್ಲಿ ನಿರತವಾಗಿದ್ದೇವೆ. ಆದರೆ, ಇದರ ಮೇಲೆ ನಮಗೆ ಯಾವುದೇ ತಕ್ಷಣದ ನಿರೀಕ್ಷೆಗಳಿಲ್ಲ. ಈ ಪ್ರಯತ್ನ ದೀರ್ಘಾವಧಿಯಲ್ಲಿ ಫಲಿಸಬಹುದು. ಅನೌಪಚಾರಿಕ ಮಾತುಕತೆ ಇನ್ನಷ್ಟು ನಡೆಯಬೇಕಿದೆ' ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
'ಬೀಜಿಂಗ್‌ನಲ್ಲಿ ಆ ದೇಶದ ನಾಯಕರೊಂದಿಗೆ ಮಾತುಕತೆ ನಡೆಸಲು ನಾನು ಸಂಧಾನಕಾರರನ್ನು ನೇಮಿಸಿದ್ದೇನೆ. ಬೇರೆಯವರೂ ಈ ನಿಟ್ಟಿನಲ್ಲೂ ಪ್ರಯತ್ನಿಸುತ್ತಿದ್ದಾರೆ' ಎಂದು ಕೇಂದ್ರ ಟಿಬೆಟ್ ಆಡಳಿತದ (ಸಿಟಿಎ) ಮುಖ್ಯಸ್ಥ ಸೆರಿಂಗ್ ಹೇಳಿದ್ದಾರೆ.
2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿದ ವಿವಾದದ ನಂತರ ಭಾರತ ಮತ್ತು ಚೀನಾ ನಡುವೆ ಮೂಡಿರುವ ಬಿರುಕಿನ ಸಂಬಂಧ ಉಲ್ಲೇಖಿಸಿದ ಸಿಟಿಎ ನಾಯಕ, ಭಾರತದ ಗಡಿಯಲ್ಲಿ ಚೀನಾದ ಆಕ್ರಮಣವು ಟಿಬೆಟ್ ಸಮಸ್ಯೆಯನ್ನೂ ಎತ್ತಿ ತೋರಿಸಿದೆ ಎಂದು ಹೇಳಿದರು.