ಕಾಸರಗೋಡು: ನಾಸ್ತಿಕ್ಯ ಎಂಬ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವಲ್ಲಿ ಶ್ರೀ ಶಂಕರ ಭಗವತ್ಪಾದರ ಬೋಧನೆ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿರುವುದಾಗಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಅವರು ಭಾನುವಾರ ಶ್ರೀ ಎಡನೀರು ಮಠದಲ್ಲಿ ತಮಗೆ ನೀಡಿದ ಪೂರ್ಣಕುಂಭ ಸ್ವಾಗತ, ಗುರುಕಾಣಿಕೆ ಸಮರ್ಪಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಶಂಕರ ಭಗವತ್ಪಾದರು ಜ್ಞಾನವೆಂಬ ಅಗ್ನಿಯಿಂದ ಅಜ್ಞಾನವನ್ನು ಭಸ್ಮ ಮಾಡಿದವರು. ಸೂರ್ಯನಿಗೆ ಕತ್ತಲು ಹೋಗಲಾಡಿಸುವ ಶಕ್ತಿ ಹೊಂದಿದ್ದರೆ, ಶ್ರೀ ಶಂಕರ ಭಗವತ್ಪಾದರು ಮನಸ್ಸಿನಲ್ಲಿರುವ ಕತ್ತಲೆ ಹೋಗಲಾಡಿಸಿದ ಸನಾತನ ವೈದಿಕ ಧರ್ಮದ ಉದ್ಧಾರಕರಾಗಿದ್ದರು ಎಂದು ತಿಳಿಸಿದರು. ಹರಿ ಮತ್ತು ಹರ ಇಬ್ಬರೂ ಏಕ ಚೈತನ್ಯ ಹೊಂದಿದವರು. ಭಗವಂತನ ಅನೇಕ ರೂಪದಲ್ಲಿ ಒಂದು ರೂಪವಾಗಿರುವ ದೇವರ ವಿಷಯದಲ್ಲಿ ತಾರತಮ್ಯ ದೃಷ್ಟಿ ಮನುಷ್ಯರಲ್ಲಿ ಇರಬಾರದು ಎಂದು ತಿಳಿಸಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಉಪಸ್ಥಿತರಿದ್ದರು. ಈ ಸಂದರ್ಭ ಗುರುವಂದನೆ, ಅಭಿವಂದನಾ ಪತ್ರ ಸಮರ್ಪಣೆ ನಡೆಯಿತು. ಸಿ.ಎಚ್ ಗೋಪಾಲಕೃಷ್ಣ ಭಟ್ ವಿರಚಿತ ವಿಶೇಷ ಗ್ರಂಥವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು. ಶ್ರೀ ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಎ ಮುರಳಿ, ವೇದ ಮೂರ್ತಿ ನರಸಿಂಹ ಅಡಿಗ ಕೊಲ್ಲೂರು, ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್, ಶೃಂಗೇರಿ ಮಠದ ಅಧಿಕಾರಿಗಳು, ವಿದ್ವಾಂಸರು ಉಪಸ್ಥಿತರಿದ್ದರು.
ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಸ್ವಾಗತಿಸಿದರು. ವೇದಮೂರ್ತಿ ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.