ತಿರುವನಂತಪುರಂ: ಉತ್ಸಾಹ ಮತ್ತು ಗುರಿ ತಲುಪುವ ಛಲವಿದ್ದರೆ ಎಂತಹ ಅಸಾಧ್ಯವಾದುದನ್ನೂ ಸಾಧಿಸಿ ತೋರಿಸಬಹುದು. ಇದಕ್ಕೆ ಜಿಲುಮೋಲ್ ಮೇರಿಯೆಟ್ ಥಾಮಸ್ ನಿದರ್ಶನವಾಗಿ ನಿಲ್ಲುತ್ತಾಳೆ. 32 ವರ್ಷದ ಈಕೆ ಎರಡೂ ಕೈಗಳಿಲ್ಲದಿದ್ದರೂ ಚಾಲನಾ ಪರವಾನಗಿ ಪಡೆದ ಮೊದಲ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಜಿಲುಮೋಲ್ ಕಾರು ಚಾಲನೆಗೆ ತನ್ನ ಪಾದಗಳನ್ನು ಬಳಸುತ್ತಾಳೆ. ಎಂತಹ ಟ್ರಾಫಿಕ್ ಇದ್ದರೂ ಅನುಭವಿಗಳು ಸಾಧಾರಣವಾಗಿ ಕೈಗಳಿಂದ ಕಾರು ಚಾಲನೆ ಮಾಡುವಂತೆಯೇ ವೇಗವಾಗಿಯೇ ಕಾರು ಚಾಲನೆ ಮಾಡುತ್ತಾಳೆ.
ಜಿಲುಮೋಲ್ ಗೆ ಡ್ರೈವಿಂಗ್ ಲೈಸೆನ್ಸ್ ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಆರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆಕೆ 2023 ರಲ್ಲಿ ಪರವಾನಗಿ ಪಡೆದಳು. ಇದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲಕ್ಕಾಡ್‌ನಲ್ಲಿ ನೀಡಿದ್ದರು. ರಾಜ್ಯ ಅಂಗವಿಕಲರ ಆಯೋಗದ ಆಸಕ್ತಿ ಮೇರೆಗೆ ಕೊಚ್ಚಿಯ ಖಾಸಗಿ ಕಂಪನಿ ಆಕೆ ಓಡಿಸಲು ಅನುಕೂಲವಾಗುವಂತೆ ಆಕೆಯ ಕಾರ್ ಅನ್ನು ಮಾರ್ಪಡಿಸಿದ್ದು, ಜಿಲುಮೋಲ್ ಕೊಂಚವೂ ಹಿಂಜರಿಕೆಯಿಲ್ಲದೆ ಕಾರ್ ಅನ್ನು ಚಾಲನೆ ಮಾಡುತ್ತಾರೆ.
ಕಾನೂನು ಹೋರಾಟ: ಜಿಲುಮೋಲ್ ಮೇರಿಯೆಟ್ ಥಾಮಸ್ ತನ್ನ ಹೆತ್ತವರನ್ನು ಕಳೆದುಕೊಂಡ ನಂತರ ಬೇರೆಯವರ ಮೇಲೆ ಅವಲಂಬಿತವಾಗಬಾರದೆಂದು ನಿರ್ಧರಿಸಿ ವಡುತಲದ ಮರಿಯಾ ಡ್ರೈವಿಂಗ್ ಸ್ಕೂಲ್‌ನಲ್ಲಿ ಡ್ರೈವಿಂಗ್ ಕಲಿತು, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಡುಕ್ಕಿ ಜಿಲ್ಲೆಯ ತೊಡುಪುಳ ಆರ್‌ಟಿಒ ಅವರನ್ನು ಸಂಪರ್ಕಿಸಿದಳು. ಆದರೆ ಆರ್‌ಟಿಒ ಅಧಿಕಾರಿಗಳು ಆಕೆಯ ಅರ್ಜಿಯನ್ನು ತಿರಸ್ಕರಿಸಿದರು. ನಂತರ ಆಕೆ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಳು.