ಬದಿಯಡ್ಕ: ಬಯಸಿದ ಕಾರ್ಯಗಳು ನೆರವೇರಬೇಕಾದರೆ ದೇವರ ಅನುಗ್ರಹವಿರಬೇಕು. ಮನುಷ್ಯ ಪ್ರಯತ್ನ ಎಷ್ಟೇ ಇದ್ದರೂ ದೈವಸಂಕಲ್ಪ ಬೇರೆಯಿರುತ್ತದೆ. ಈ ಕ್ಷೇತ್ರವು ಸುಂದರವಾಗಿ ರೂಪುಗೊಂಡಿರುವುದು ಶಂಕರನಾರಾಯಣನ ಅನುಗ್ರಹ ಭಗವದ್ಭಕ್ತರ ಭಕ್ತಿಯ ಫಲ ಎನ್ನಬಹುದು ಎಂದು ಎಡನೀರು ಮಠಾಧೀಶ ಶ್ರೀಮದ್. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೊದಲ ದಿನ ಭಾನುವಾರ ಜರಗಿದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ದೀಪಬೆಳಗಿಸಿ ಚಾಲನೆಗೈದು ಅವರು ಆಶೀರ್ವಚನವನ್ನು ನೀಡಿದರು.
ಭಗವದ್ಭಕ್ತರ ತಪಸ್ಸಿನ ಫಲವಾಗಿ ದೇವರ ಅನುಗ್ರಹವಾಗಿದೆ. ದೇವಸ್ಥಾನಗಳು ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಮುಂದುವರಿಯಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶ್ರೀಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದ ಬಿ.ವಸಂತ ಪೈ ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ, ಉದ್ಯಮಿ ಕೃಷ್ಣಪ್ರಸಾದ ರೈ ಕುತ್ತಿಕಾರು, ಫಿಟ್ ಪರ್ಸನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ರಮಾನಾಥ ಶೆಟ್ಟಿ, ಕೇರಳ ಸರ್ಕಾರದ ಸಾರ್ವಜನಿಕ ಆಡಳಿತ ವಿಭಾಗದ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಎಡನೀರು, ಮಾತೃಸಮಿತಿ ಅಧ್ಯಕ್ಷೆ ಜಯಂತಿ ವಿ. ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿ, ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್(ರಿ) ಅಧ್ಯಕ್ಷ ವಿ.ಬಿ.ಕುಳಮರ್ವ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ಎಂ.ಶ್ಯಾಮ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು.