ಕೊಚ್ಚಿ: ಆನ್ಲೈನ್ನಲ್ಲಿ ಬುಕ್ ಮಾಡಿದ ಪ್ರಾಡಕ್ಟ್ ಬದಲಾಗಿ ಬೇರೆ ಪ್ರಾಡಕ್ಟ್ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆನ್ಲೈನ್ನಲ್ಲಿ ಫೋನ್ ಬುಕ್ ಮಾಡಿದ ಗ್ರಾಹಕ, ತನಗೆ ಡೆಲಿವರಿಯಾದ ವಸ್ತುವನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾನೆ.
ಇತ್ತೀಚೆಗೆ ಘಾಜಿಯಾಬಾದ್ ಮೂಲದ ಗ್ರಾಹಕ 22 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್ ಅನ್ನು ಇ ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್ನಲ್ಲಿ ಬುಕ್ ಮಾಡಿದ್ದ. ನಿಗದಿತ ಸಮಯಕ್ಕೆ ಡೆಲಿವರಿ ಬಾಯ್ ಆರ್ಡರ್ ಅನ್ನು ಡೆಲಿವರಿ ಮಾಡಿದ್ದಾರೆ. ತನಗೆ ತಲುಪಿದ ಬಾಕ್ಸ್ ಅನ್ನು ಖುಷಿಯಿಂದ ಓಪನ್ ಮಾಡಿದ ಗ್ರಾಹಕನಿಗೆ ಭಾರಿ ನಿರಾಸೆಯೇ ಕಾದಿತ್ತು. ಏಕೆಂದರೆ, ಬಾಕ್ಸ್ ಒಳಗಡೆ ಇದ್ದಿದ್ದು ಮೊಬೈಲ್ ಫೋನ್ ಅಲ್ಲ ಬದಲಾಗಿ ಒಂದು ಕಲ್ಲು.
ಕಲ್ಲನ್ನು ಕಂಡು ಆಘಾತಗೊಂಡ ಗ್ರಾಹಕ ಆರ್ಡರ್ ಅನ್ನು ವಾಪಸ್ ಮಾಡಲು ಮುಂದಾಗಿದ್ದಾನೆ. ಆದರೆ, ಫ್ಲಿಪ್ಕಾರ್ಟ್ ರಿಟರ್ನ್ ಮನವಿಯನ್ನು ತಿರಸ್ಕರಿಸಿತು. ಇದರಿಂದ ಗ್ರಾಹಕ ಮತ್ತಷ್ಟು ಹತಾಶೆಗೆ ಒಳಗಾಗಿ, ತನಗಾದ ಕಹಿ ಅನುಭವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ಹೊರಹಾಕಿದನು. ಗ್ರಾಹಕನ ಆಕ್ರೋಶಕ್ಕೆ ಹೆದರಿದ ಫ್ಲಿಪ್ಕಾರ್ಟ್ ತಕ್ಷಣ ಪ್ರತಿಕ್ರಿಯಿಸಿ, ಸಮಸ್ಯೆ ಬಗೆಹರಿಸುವುದಾಗಿ ಹೇಳಿದೆ.
ಫ್ಲಿಪ್ಕಾರ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಗ್ರಾಹಕನ ಬಳಿ ಕ್ಷಮೆಯಾಚಿಸಿದೆ. ಅಲ್ಲದೆ, ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಬದ್ಧತೆಯ ಬಗ್ಗೆ ಕಂಪನಿಯು ಗ್ರಾಹಕರಿಗೆ ಭರವಸೆ ನೀಡಿದೆ. ನೀವು ಆರ್ಡರ್ ಮಾಡಿದ್ದನ್ನು ಹೊರತುಪಡಿಸಿ ಬೇರೇನನ್ನೂ ನೀವು ಸ್ವೀಕರಿಸಬೇಕೆಂದು ನಾವು ಎಂದಿಗೂ ಬಯಸುವುದಿಲ್ಲ ಮತ್ತು ಈ ಘಟನೆಗಾಗಿ ತೀವ್ರವಾಗಿ ವಿಷಾದಿಸುತ್ತೇವೆ. ನಿಮಗೆ ಹೆಚ್ಚಿನ ಸಹಾಯವನ್ನು ಒದಗಿಸಲು ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ದಯವಿಟ್ಟು ನಿಮ್ಮ ಆರ್ಡರ್ ವಿವರಗಳನ್ನು ನಮ್ಮೊಂದಿಗೆ ಖಾಸಗಿಯಾಗಿ ಹಂಚಿಕೊಳ್ಳಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.
ಎಚ್ಚರಿಕೆಯಿಂದಿರಿ
ನಮ್ಮ ಬ್ರ್ಯಾಂಡ್‌ನಂತೆ ಕಾರ್ಯನಿರ್ವಹಿಸುತ್ತಿರುವ ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಬಗ್ಗೆ ಎಚ್ಚರದಿಂದ ಇರಲು ಫ್ಲಿಪ್ಕಾರ್ಟ್ ಗ್ರಾಹಕರಿಗೆ ಸಲಹೆ ನೀಡಿದೆ. ಗ್ರಾಹಕರು ಜಾಗರೂಕರಾಗಿರುವಂತೆ ಮತ್ತು ನಕಲಿ ಖಾತೆಗಳೊಂದಿಗೆ ಸಂವಹನ ನಡೆಸುವುದನ್ನು ತಡೆಯಲು ಕಂಪನಿಯು ಗ್ರಾಹಕರನ್ನು ಒತ್ತಾಯಿಸಿದೆ.