ವಿಶ್ವಸಂಸ್ಥೆ: ಪಾಕಿಸ್ತಾನ ಮೂಲದ ಜಾಗತಿಕ ಭಯೋತ್ಪಾದಕರ ಪಟ್ಟಿ ಘೋಷಿಸುವಂತಹ ವಿಷಯಗಳ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೆಲವು ಸದಸ್ಯರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುತ್ತಿಲ್ಲ ಎಂದು ಭಾರತ ಕಿಡಿಕಾರಿದೆ.
ಪರೋಕ್ಷವಾಗಿ ಚೀನಾ ಧೋರಣೆಯನ್ನು ಟೀಕಿಸಿರುವ ಭಾರತ, 'ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೆಲವು ಸದಸ್ಯ ರಾಷ್ಟ್ರಗಳು ತಮ್ಮ ವಿಟೊ ಅಧಿಕಾರವನ್ನು ಪ್ರಸ್ತಾವನೆಗಳಿಗೆ ತಡೆವೊಡ್ಡುವುದು ಅಥವಾ ನಿರ್ಬಂಧಿಸುವುದಕ್ಕೆ ಸೀಮಿತವಾಗಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು, 'ಹೆಚ್ಚುತ್ತಿರುವ ಸವಾಲುಗಳನ್ನು ನಿಭಾಯಿಸುವಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ವಹಿಸುತ್ತಿರುವ ಪಾತ್ರ ಕನಿಷ್ಠ ಮಟ್ಟದಲ್ಲಿದೆ. ಅದರ ಕಾರ್ಯವೈಖರಿ ತುಂಬಾ ಹೀನಾಯವಾಗಿದೆ' ಎಂದು ಅವರು ಹರಿಹಾಯ್ದಿದ್ದಾರೆ.