ಕಾಸರಗೋಡು: ನಗರದ ಹಳೇ ಸೂರ್ಲು ಮದ್ರಸಾ ಶಿಕ್ಷಕ, ಮೂಲತ: ಕೊಡಗು ನಿವಾಸಿ ಮಹಮ್ಮದ್ ರಿಯಾಸ್ ಮೌಲವಿ(28)ಕೊಲೆ ಪ್ರಕರಣದ ಮೂರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ತ್ವರಿತವಾಗಿ ಅಪೀಲು ಪ್ರಕ್ರಿಯೆ ಪೂರ್ತಿಗೊಳಿಸುವಂತೆ ಸರ್ಕಾರ ಎ.ಜಿಗೆ ಸೂಚಿಸಿದೆ. ಎ.ಜಿ ಹಾಗೂ ಮುಖ್ಯಮಂತ್ರಿ ಜತೆಗಿನ ಸಮಾಲೋಚನೆ ನಂತರ ಈ ತೀರ್ಮಾನ ಹೊರಬಿದ್ದಿದೆ. ಬೇಸಿಗೆ ರಜಾ ಕಾಲಾವಧಿಗೂ ಮೊದಲು ಅಪೀಲು ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.
ಕೆಲವು ತಿಂಗಳುಗಳ ಕಾಲ ನಡೆದ ಸಮಗ್ರ ವಿಚಾರಣೆ ನಂತರ ಆರೋಪಿಗಳಾದ ಕಾಸರಗೋಡು ಕೇಳುಗುಡ್ಡೆ ನಿವಾಸಿಗಳಾದ ಅಜೇಶ್ ಅಲಿಯಾಸ್ ಅಪ್ಪು(20), ಕೇಳುಗುಡ್ಡೆ ಗಂಗೆ ಕುಟೀರದ ಅಖಿಲೇಶ್ ಅಲಿಯಾಸ್ ಅಖಿಲ್(25) ಹಾಗೂ ಕೇಳುಗುಡ್ಡೆ ನಿವಾಸಿ ನಿತಿನ್(19)ಅವರನ್ನು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಆರೋಪಿಗಳು ಆರೆಸ್ಸೆಸ್ ಕಾರ್ಯಕರ್ತರು ಹಾಗು ಮತೀಯವಾದಿಗಳೆಂದು ಆರೋಪ ಪಟ್ಟಿಯಲ್ಲಿ ದಾಖಲಿಸಿದ್ದರೂ, ಇದನ್ನು ಸಾಬೀತುಪಡಿಸುವಲ್ಲಿ ಪ್ರೋಸಿಕ್ಯೂಶನ್ ವಿಫಲವಾಗಿರುವುದಾಗಿ ತೀರ್ಪಿನಲ್ಲಿ ತಿಳಿಸಿಲಾಗಿದೆ.