ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಬಿಜೆಪಿ ಯಶಸ್ವಿಯಾದರೆ ದೇಶದ ಸಂವಿಧಾನವನ್ನೇ ಬದಲಾಯಿಸಿ, ಆ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು.
ರಾಮ್‌ಲೀಲಾ ಮೈದಾನದಲ್ಲಿ 'ಪ್ರಜಾಪ್ರಭುತ್ವ ಉಳಿಸಿ' ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಚುನಾವಣೆಯು ಸಾಮಾನ್ಯ ಚುನಾವಣೆಯಲ್ಲ. ಇದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಚುನಾವಣೆಯಾಗಿದೆ ಎಂದು ಹೇಳಿದರು.
' ಅಂಪೈರ್‌ಗಳು ಹಾಗೂ ನಾಯಕನ ಮೇಲೆ ಒತ್ತಡ ಹೇರಿ, ಆಟಗಾರರನ್ನು ಖರೀದಿಸಿ ಪಂದ್ಯ ಗೆದ್ದರೆ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಎನ್ನುತ್ತಾರೆ. ನಮ್ಮ ಮುಂದೆ ಲೋಕಸಭಾ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು?, ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. ನರೇಂದ್ರ ಮೋದಿಯವರು ಈ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಕಿಡಿಕಾರಿದರು.
'ಬಿಜೆಪಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದೆ. ಆದರೆ ವಿದ್ಯುನ್ಮಾನ ಮತಯಂತ್ರ (ಇವಿಎಂ), ಮ್ಯಾಚ್ ಫಿಕ್ಸಿಂಗ್, ವಿರೋಧ ಪಕ್ಷಗಳ ನಾಯಕರ ಮೇಲೆ ಒತ್ತಡ ಹಾಗೂ ಮಾಧ್ಯಮಗಳನ್ನು ಖರೀದಿಸದಿದ್ದರೆ ಬಿಜೆಪಿ 180 ಸ್ಥಾನಗಳನ್ನು ದಾಟಲು ಸಾಧ್ಯವಿಲ್ಲ' ಎಂದು ರಾಹುಲ್ ವ್ಯಂಗ್ಯವಾಡಿದರು.
'ಪ್ರಧಾನಿ ನರೇಂದ್ರ ಮೋದಿ ಕೆಲವು ಶ್ರೀಮಂತರೊಂದಿಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಬಡವರಿಂದ ಸಂವಿಧಾನವನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ' ಎಂದು ರಾಹುಲ್ ಆರೋಪಿಸಿದರು.
ಸಂವಿಧಾನವು ಜನರ ಧ್ವನಿಯಾಗಿದ್ದು, ಅದನ್ನು ಬದಲಾಯಿಸಿದರೆ ದೇಶವು ಅಂತ್ಯಗೊಳ್ಳುತ್ತದೆ ಎಂದು ಪ್ರತಿಪಾದಿಸಿದ ಅವರು, ಸಂವಿಧಾನ ಇಲ್ಲದಿದ್ದರೆ ಬಡವರ ಹಕ್ಕುಗಳು ಹಾಗೂ ಮೀಸಲಾತಿಯೂ ಇರುವುದಿಲ್ಲ ಎಂದರು.
'ನಾವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಾಗ ಸಂವಿಧಾನವನ್ನು ಬದಲಾಯಿಸುತ್ತೇವೆ' ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಸಿಬಿಐ. ಇ.ಡಿ ಮುಂತಾದ ತನಿಖಾ ಸಂಸ್ಥೆಗಳ ಮೂಲಕ ಬೆದರಿಸಿ ದೇಶವನ್ನು ನಡೆಸಬಹುದು ಎಂದು ಬಿಜೆಪಿಗರು ಭಾವಿಸುತ್ತಿದ್ದಾರೆ. ದೇಶದ ಜನರ ಧ್ವನಿಯನ್ನು ಈ ಜಗತ್ತಿನಲ್ಲಿ ಯಾವುದೇ ಶಕ್ತಿಯಿಂದ ಹತ್ತಿಕ್ಕಲು ಸಾಧ್ಯವಿಲ್ಲ' ಎಂದು ರಾಹುಲ್ ಹೇಳಿದರು.
'ಬಿಜೆಪಿಯು ಮ್ಯಾಚ್ ಫಿಕ್ಸಿಂಗ್ ಮೂಲಕ ಚುನಾವಣೆಯಲ್ಲಿ ಗೆದ್ದು ಸಂವಿಧಾನವನ್ನು ಬದಲಾಯಿಸಿದರೆ ದೇಶದಲ್ಲಿ ಶಾಂತಿ ನೆಲಸುವುದಿಲ್ಲ' ಎಂದರು.