ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದ ವಠಾರದಿಂದ ತೆರವುಗೊಳಿಸಿ ಕಾಸರಗೋಡು ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನೆಡಲಾದ ಮಾವಿನಮರ ಎರಡು ವರ್ಷ ಸಮೀಪಿಸುತ್ತಿದ್ದು, ಹುಲುಸಾಗಿ ಬೆಳೆದು ನಿಂತಿದೆ.
ನೆರಳು ಮರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಡೆಸಲಾದ 'ಆಪರೇಶನ್ ಪಯಸ್ವಿನಿ'ಯನ್ವಯ ಮರವನ್ನು ಹೆಚ್ಚಿನ ಶ್ರಮವಹಿಸಿ 2022 ಜೂನ್ ತಿಂಗಳಲ್ಲಿ ಅಡ್ಕತ್ತಬೈಲ್ ಶಾಲೆಗೆ ಸ್ಥಳಾಂತರಿಸಲಾಗಿತ್ತು. ಕೇರಳದ ಖ್ಯಾತ ಕವಯಿತ್ರಿ ಎಂ. ಸುಗದ ಕುಮಾರಿ ಅವರು ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನೆಟ್ಟಿದ್ದ'ಪಯಸ್ವಿನಿ'ಹೆಸರಿನ ಈ ಮಾವಿನ ಮರವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂದರ್ಭ ಸ್ಥಳಾಂತರಿಸಿ, ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನೆಡಲಾಗಿತ್ತು. . ಸುಗತಕುಮಾರಿ ಅವರ ನಿಧನದ ನಂತರ ಶ್ರೇಷ್ಠ ಕವಿಯ ಸಂಸ್ಮರಣಾ ದಿನವನ್ನು ಆಚರಿಸಲು ವಿದ್ಯಾರ್ಥಿಗಳು ಹೊಸ ಬಸ್ ನಿಲ್ದಾಣದ ಇದೇ ಮಾವಿನ ಮರದ ಬುಡಕ್ಕೆ ಆಗಮಿಸುತ್ತಿದ್ದರು.
ಮರವನ್ನು ಅಡ್ಕತ್ತಬೈಲ್ ಶಾಲಾ ವಠಾರಕ್ಕೆ ಸ್ಥಳಾಂತರಿಸಿ ನೆಟ್ಟ ಒಂದೆರಡು ತಿಂಗಳಲ್ಲೇ ಚಿಗುರೊಡೆಯಲಾರಂಭಿಸಿದ್ದು, ನಂತರದ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳು ಇದರ ಪೋಷಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಪ್ರಸಕ್ತ ಮರ ಎತ್ತರಕ್ಕೆ ಬೆಳೆದು ನಿಂತಿದೆ.
ರಸ್ತೆ ಅಭಿವೃದ್ಧಿ ಸಂದರ್ಭ ನೂರರು ಮರಗಳನ್ನು ಕಡಿದುರುಳಿಸಲಾಗಿದ್ದು, ಇದರ ನೆನಪಿಗಾಗಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಗುತ್ತಿಗೆದಾರರಾದ ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ ವಿವಿಧೆಡೆ ಸಸಿಗಳನ್ನು ನೆಟ್ಟು ಬೆಳೆಸಿದ್ದು, ಇದರಲ್ಲಿ ಪಯಸ್ವಿನಿ ಹೆಸರಿನ ಮರವೂ ಒಳಗೊಂಡಿದೆ. ಪ್ರತಿ ವರ್ಷ ಈ ಮರಕ್ಕೆ ಶಾಲಾ ಮಕ್ಕಳು ಹೂವಿನ ಹಾರ ಹಾಕಿ ಪ್ರಕೃತಿ ಸಂರಕ್ಷಣೆ ಬಗ್ಗೆ ಪ್ರತಿಜ್ಞೆಯನ್ನೂ ಕೈಗೊಳ್ಳುತ್ತಾರೆ.