ಬದಿಯಡ್ಕ: ಕಾಸರಗೋಡು ಮತ್ತು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ವತಿಯಿಂದ ವರ್ಷಂಪ್ರತಿ ನಡೆದು ಬರುತ್ತಿರುವ ವಸಂತ ವೇದಪಾಠ ಶಿಬಿರ ಪೆರಡಾಲ ಶ್ರೀಉನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಬುಧವಾರ ಪ್ರಾರಂಭಗೊಂಡಿತು.
ನಿಟ್ಟೆ ವೈದ್ಯಕೀಯ ವಿಭಾಗದ ನಿವೃತ್ತ ಪ್ರಾಂಶುಪಾಲ ಬಳ್ಳಮಜಲು ಡಾ. ರಾಜೇಂದ್ರ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈಶ್ವರ ಭಟ್ ಅಧ್ಯಕ್ಷತೆ ವಹಿಸಿ ವೇದ ಪಾಠಶಾಲೆಯ ಪ್ರಸ್ತುತತೆಯನ್ನು ವಿವರಿಸಿ ಶುಭ ಹಾರೈಸಿದರು.
ಮಂಗಳೂರಿನ ಶಂಕರ ಸಗ್ರಿತ್ತಾಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅವರಿಂದ ಸಂಪಾದಿತ ಕೃತಿಯಾದ "ಶ್ರುತಿ ಪ್ರಸೂನಮ್" ಎಂಬ ವೇದ ಮಂತ್ರಗಳು, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಇತ್ಯಾದಿ ಸಂಗ್ರಹವಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ದೇವಾಲಯದ ಆಡಳಿತ ಮುಖ್ಯಸ್ಥÀ ವೆಂಕಟರಮಣ ಭಟ್ ಮಾತನಾಡಿದರು. ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪೆರ್ಮುಖ ಈಶ್ವರ ಭಟ್ಟರ ವತಿಯಿಂದ ಸಂಧ್ಯಾವಂದನೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ಖಜಾಂಜಿ ಗೋವಿಂದ ಭಟ್ ಏತಡ್ಕ, ಕಾರ್ಯದರ್ಶಿ ಶಾಮಪ್ರಸಾದ ಕಬೆಕ್ಕೋಡು, ವೇದ ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ, ಮುರಳೀಧರ ಶರ್ಮಾ ಉಪಸ್ಥಿತರಿದ್ದರು. ಕೋಡಿಯಡ್ಕ ವೇದಮೂರ್ತಿ ಶಿವರಾಮ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಈ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ಟರ ಅಗಲಿಕೆಯನ್ನು ಸ್ಮರಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. 60 ರಷ್ಟು ವಿದ್ಯಾರ್ಥಿಗಳು ಹಾಗೂ ರಕ್ಷಕರು ಉಪಸ್ಥಿತರಿದ್ದರು. ಪಟ್ಟಾಜೆ ವೇದಮೂರ್ತಿ ವೆಂಕಟೇಶ ಭಟ್ ವೇದದ ಮಹತ್ವವನ್ನು ವಿವರಿಸಿ ವಂದಿಸಿದರು.