ಹರಿದ್ವಾರ: ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧರ್ಮವನ್ನು ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಆರೋಪಿಸಿದ್ದಾರೆ.
ಕೆಲವರು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ದೇವಾಲಯಕ್ಕೆ ಭೇಟಿ ನೀಡಿ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ ಎಂದು ರಾಹುಲ್ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಹರಿದ್ವಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಬೆಂಬಲಿಸಿ ನಡ್ಡಾ ಪ್ರಚಾರ ನಡೆಸಿದರು. ಈ ವೇಳೆ ಮಾಯಾದೇವಿ ದೇಗುಲದಲ್ಲಿ ಸಾಧು, ಸಂತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸಾಮಾಜಿಕ ಅಭಿವೃದ್ಧಿ ಹಾಗೂ ರಾಜಕೀಯ ಹೋರಾಟದಲ್ಲಿ ಹೋರಾಡುವ ಸಲುವಾಗಿ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಆಶೀರ್ವದಿಸಬೇಕು' ಎಂದು ಮನವಿ ಮಾಡಿದರು.
'ಸನಾತನ (ಧರ್ಮ) ಜಾಗೃತಗೊಳ್ಳುವ ಸಮಯವಿದು. ಭಾರತದ ಯುಗ. ದೇಶದ ಅಭಿವೃದ್ಧಿ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಮೋದಿ ನಡೆಸುತ್ತಿರುವ ರಾಜಕೀಯ ಹೋರಾಟದಲ್ಲಿ ನಿಮ್ಮ ಧಾರ್ಮಿಕ ಬೆಂಬಲ ಮತ್ತು ಆಶೀರ್ವಾದವು ಪ್ರಧಾನಿ ಅವರನ್ನು ಮತ್ತಷ್ಟು ಬಲಪಡಿಸಲಿದೆ' ಎಂದು ನಡ್ಡಾ ತಿಳಿಸಿದರು.
ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ನಾಯಕರು ಸನಾತನ ಧರ್ಮದ ವಿರುದ್ಧ ದಾಳಿ ಮಾಡುತ್ತಿದ್ದು, ಅಂಥವರಿಗೆ ನೀವು ಆಶೀರ್ವಾದ ನೀಡುವೀರಾ ಎಂದು ಪ್ರಶ್ನಿಸಿದರು.
ಸನಾತನ ಧರ್ಮಕ್ಕೆ ಪ್ರಧಾನಿ ಮೋದಿ ಸಲ್ಲಿಸಿದ ಸೇವೆಯನ್ನು ನಡ್ಡಾ ಉಲ್ಲೇಖ ಮಾಡಿದರು. ಕಳೆದ 10 ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ದೇಶದಾದ್ಯಂತ ಅನೇಕ ದೇವಾಲಯಗಳ ಪುನರ್‌ನವೀಕರಣ ಹಾಗೂ ಜೀರ್ಣೋದ್ಧಾರದ ಕುರಿತು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಧ್ವಂಸಗೊಳಿಸಿದ ದೇಗುಲವನ್ನು ಪುನರ್‌ನವೀಕರಣ ಮಾಡಲಾಗಿದೆ ಎಂದೂ ಹೇಳಿದರು.