ಈ ಟೀಕಾಕಾರರು ಸೀಮಿತ ದೃಷ್ಟಿಕೋನದ ರಾಜಕೀಯ ಹಿತಾಸಕ್ತಿಯಿಂದ, ವೈಯಕ್ತಿಕ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರು ಇರಿಸಿರುವ ನಂಬಿಕೆಯನ್ನು ಹಾಳುಮಾಡಲು ಯತ್ನಿಸುತ್ತಿದ್ದಾರೆ ಎಂದು ಕೂಡ ಪತ್ರದಲ್ಲಿ ಆರೋಪಿಸಲಾಗಿದೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು ಈ ಪತ್ರ ಬರೆದಿದ್ದಾರೆ. ಆದರೆ, ತಾವು ಈ ಪತ್ರ ಬರೆದಿದ್ದಕ್ಕೆ ನಿರ್ದಿಷ್ಟವಾಗಿ ಯಾವ ಘಟನೆಗಳು ಕಾರಣ ಎಂಬುದನ್ನು ಅವರು ಉಲ್ಲೇಖಿಸಿಲ್ಲ.
ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಕೈಗೊಂಡ ಕ್ರಮಗಳ ವಿಚಾರವಾಗಿ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ಹೊತ್ತಿನಲ್ಲಿ ಈ ಪತ್ರ ಬರೆದಿದ್ದಾರೆ.
ನ್ಯಾಯಮೂರ್ತಿಗಳಾದ (ನಿವೃತ್ತ) ದೀಪಕ್ ವರ್ಮ, ಕೃಷ್ಣ ಮುರಾರಿ, ದಿನೇಶ್ ಮಾಹೇಶ್ವರಿ, ಎಂ.ಆರ್. ಶಾ ಅವರು ಪತ್ರ ಬರೆದವರಲ್ಲಿ ಸೇರಿದ್ದಾರೆ.
ಈ ಗುಂಪುಗಳು ಕಪಟತನದ ದಾರಿ ಹಿಡಿದು, ನ್ಯಾಯಮೂರ್ತಿಗಳು ಹಾಗೂ ನ್ಯಾಯಾಲಯಗಳ ಘನತೆಗೆ ಚ್ಯುತಿ ತರುವಂತೆ ಮಾತುಗಳನ್ನಾಡಿ, ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಸ್ಪಷ್ಟ ಯತ್ನವನ್ನು ನಡೆಸಿವೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
'ಇಂತಹ ಕೃತ್ಯಗಳು ನ್ಯಾಯಾಂಗದ ಪಾವಿತ್ರ್ಯತೆಗೆ ಅಗೌರವ ತೋರುವುದಷ್ಟೇ ಅಲ್ಲದೆ, ನಿಷ್ಪಕ್ಷಪಾತ ಧೋರಣೆ ಹಾಗೂ ನ್ಯಾಯಸಮ್ಮತ ನಿಲುವಿನ ತತ್ವಕ್ಕೆ ನೇರವಾದ ಸವಾಲು ಒಡ್ಡುತ್ತವೆ' ಎಂದು ಹೇಳಲಾಗಿದೆ.
'ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಇರುವ ಆದೇಶಗಳನ್ನು ಪ್ರಶಂಸಿಸುವುದು, ಅನುಗುಣವಾಗಿ ಇಲ್ಲದ ಆದೇಶಗಳನ್ನು ತೀವ್ರವಾಗಿ ಟೀಕಿಸುವುದು ನ್ಯಾಯಾಂಗದ ಪರಿಶೀಲನೆ ಹಾಗೂ ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತತ್ವವನ್ನೇ ದುರ್ಬಲ ಗೊಳಿಸುವಂಥದ್ದು' ಎಂದು ಪತ್ರದಲ್ಲಿ ಬರೆಯಲಾಗಿದೆ.