ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಹಿಮನದಿಯ ಮೇಲೆ ಭಾರತೀಯ ಸೇನೆ ಸಂಪೂರ್ಣ ನಿಯಂತ್ರಣ ಸಾಧಿಸಿ 40 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಮೂಲ ಸೌಕರ್ಯ ವೃದ್ಧಿಯಾಗಿದ್ದು, ಸೇನಾ ಕಾರ್ಯಾಚರಣೆಯ ಸಾಮರ್ಥ್ಯವೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
'ಹೆವಿ-ಲಿಫ್ಟ್ ಹೆಲಿಕಾಪ್ಟರ್‌ಗಳು', 'ಲಾಜಿಸ್ಟಿಕ್ ಡ್ರೋನ್'ಗಳು, 'ಆಲ್ ಟರೇನ್' ವಾಹನಗಳು ಮತ್ತು ವ್ಯಾಪಕ ಸಂಪರ್ಕ ಜಾಲವು ಸಿಯಾಚಿನ್‌ನಲ್ಲಿ ಭಾರತದ ಯುದ್ಧ ಸಾಮರ್ಥ್ಯವನ್ನು ವೃದ್ಧಿಸಿವೆ ಎಂದು ಅವರು ತಿಳಿಸಿದ್ದಾರೆ.
ಕಾರಕೋರಂ ಪರ್ವತ ಶ್ರೇಣಿಯಲ್ಲಿ ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್ ಹಿಮನದಿಯ ಪ್ರದೇಶವನ್ನು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯ ಎಂದು ಕರೆಯಲಾಗುತ್ತದೆ. ಅಲ್ಲಿನ ಹಿಮಪಾತ ಮತ್ತು ಭಾರಿ ಗಾಳಿಯನ್ನು ಲೆಕ್ಕಿಸದೆ ಭಾರತೀಯ ಸೈನಿಕರು ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
'ಆಪರೇಷನ್ ಮೇಘದೂತ್' ಕಾರ್ಯಾಚರಣೆ ಮೂಲಕ ಬಾರತೀಯ ಸೇನೆಯು 1984ರ ಏಪ್ರಿಲ್ 13ರಂದು ಹಿಮನದಿಯ ಮೇಲೆ ತನ್ನ ಸಂಪೂರ್ಣ ನಿಯಂತ್ರಣ ಸ್ಥಾಪಿಸಿತು.
'ಸಿಯಾಚಿನ್ ಹಿಮನದಿಯ ಮೇಲಿನ ಭಾರತೀಯ ಸೇನೆಯ ನಿಯಂತ್ರಣವು ಸಾಟಿಯಿಲ್ಲದ ಶೌರ್ಯ ಮತ್ತು ನಿರ್ಣಯದ ಕಥಾನಕವಾಗಿದೆ. ಅಷ್ಟೇ ಅಲ್ಲದೆ ಇಲ್ಲಿನ ತಾಂತ್ರಿಕ ಪ್ರಗತಿ ಮತ್ತು ಲಾಜಿಸ್ಟಿಕ್ ಕ್ಷೇತ್ರದಲ್ಲಿನ ಸುಧಾರಣೆಯು ಅದ್ಭುತ ಪ್ರಯಾಣವಾಗಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಕ್ರಮಗಳಿಂದ ಸಿಯಾಚಿನ್‌ನಲ್ಲಿ ಸಿಬ್ಬಂದಿಯ ಜೀವನ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯ ಗಮನಾರ್ಹ ರೀತಿಯಲ್ಲಿ ಸುಧಾರಣೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಳೆದ ವರ್ಷದ ಜನವರಿಯಲ್ಲಿ ಸೇನೆಯ ಕಾರ್ಪ್ಸ್ ಆಫ್ ಎಂಜಿನಿಯರ್ಸ್‌ನ ಕ್ಯಾಪ್ಟನ್ ಶಿವ ಚೌಹಾಣ್ ಅವರನ್ನು ಸಿಯಾಚಿನ್‌ನ ಮುಂಚೂಣಿ ಪೋಸ್ಟ್‌ನಲ್ಲಿ ನಿಯೋಜಿಸಲಾಯಿತು. ಇದು ಪ್ರಮುಖ ಯುದ್ಧಭೂಮಿಯಲ್ಲಿ ಮಹಿಳಾ ಸೇನಾ ಅಧಿಕಾರಿಯ ಮೊದಲ ಕಾರ್ಯಾಚರಣೆಯ ನಿಯೋಜನೆಯಾಗಿದೆ.
ಹಿಮನದಿ ಸ್ವಚ್ಛಗೊಳಿಸುವ ಗುರಿ
ಭಾರತೀಯ ಸೇನೆಯು ಸಿಯಾಚಿನ್ ಹಿಮನದಿಯನ್ನು ಸ್ವಚ್ಛಗೊಳಿಸುವ ಗುರಿಯನ್ನೂ ಹೊಂದಿದೆ. ಇಲ್ಲಿನ ಟನ್‌ಗಳಷ್ಟು ತ್ಯಾಜ್ಯಗಳ ಪೈಕಿ ಕೆಲವನ್ನು ಮರಬಳಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಸೇನೆಯು ತಮಿಳುನಾಡಿನ ಪ್ಲಾಸ್ಟಿಕ್ ತ್ಯಾಜ್ಯ ಸಾಗಿಸುವ ಖಾಸಗಿ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಯು ಜಾಕೆಟ್‌ಗಳ ತಯಾರಿಕೆಗೆ ತ್ಯಾಜ್ಯವನ್ನು ಮರುಬಳಕೆ ಮಾಡುತ್ತದೆ ಎಂದು ಅವರು ತಿಳಿಸಿದರು.