ನವದೆಹಲಿ:ಇಂದು ಪ್ರಾರಂಭಗೊಂಡಿರುವ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಕೆಲವು ಕಡೆ ಹಿಂಸಾಚಾರ ನಡೆದಿರುವ ಕುರಿತು ವರದಿಗಳಾಗಿವೆ. ಚಾಂದಮಾರಿಯಲ್ಲಿ ಜನರು ಮತದಾನ ಮಾಡದಂತೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಬೇಗರ್ಕತದ ಜನರು ತಮ್ಮ ಮತ ಚಲಾಯಿಸದಂತೆ ಬಿಜೆಪಿ ಸದಸ್ಯರು ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಬೆಳಗ್ಗೆ 10 ಗಂಟೆಯ ವೇಳೆಗೆ ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂಸಾಚಾರದ ಕುರಿತು ಚುನಾವಣಾ ಆಯೋಗಕ್ಕೆ ಹತ್ತಾರು ದೂರುಗಳನ್ನು ದಾಖಲಿಸಿದ್ದು, ಈ ಪೈಕಿ ಬಹುತೇಕ ದೂರುಗಳು ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿವೆ.
ಮಾವೋಪೀಡಿತ ಬಸ್ತಾರ್ ಪ್ರಾಂತ್ಯದಲ್ಲಿನ ಬಿಜಾಪುರ್ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಶುಕ್ರವಾರ ಬೆಳಗ್ಗೆ ಗ್ರನೇಡ್ ಸ್ಫೋಟ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಈ ಪ್ರದೇಶದ ಸುಪರ್ದಿ ತೆಗೆದುಕೊಳ್ಳುತ್ತಿದ್ದ ಭದ್ರತಾ ತಂಡದ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ದೊಡ್ಡ ಪ್ರಮಾಣದ ಪ್ರಚಾರ ಅಭಿಯಾನಗಳು ನಡೆದ ನಂತರ ಇಂದಿನಿಂದ ಏಳು ಹಂತದ ಲೋಕಸಭಾ ಚುನಾವಣೆ ಪ್ರಾರಂಭಗೊಂಡಿದೆ. ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನ ಬೆಳಗ್ಗೆ 7ರಿಂದ ಪ್ರಾರಂಭಗೊಂಡಿದ್ದು, ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.