ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಸೇವಾ ಸಮಿತಿಯ ಆಶ್ರಯದಲ್ಲಿ ಮೇ ಒಂದರಂದು ಲೋಕಕಲ್ಯಾಣರ್ಥವಾಗಿ ನಡೆಯಲಿರುವ ಗಣಪತಿ ಹವನ, ಶತ ರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಬಲಿವಾಡು ಕೂಟ ವಿಶೇಷ ಪ್ರಾರ್ಥನೆ ಮತ್ತು ಜೀರ್ಣೋದ್ಧಾರ ಸಮಿತಿಯು ಹಮ್ಮಿಕೊಂಡಿರುವ ಜೀರ್ಣೋದ್ಧಾರ ನಿಧಿ ಕೋಪನ್ ಡ್ರಾ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರಿಗೆ ಶ್ರೀಧಾಮದಲ್ಲಿ ನೀಡಿ ಆಶೀರ್ವಾದ ಪಡೆದುಕೊಳ್ಳಲಾಯಿತು.
ಈ ಸಂದರ್ಭ ಮಾಣಿಲಶ್ರೀ ಅವರು ಮಾತನಾಡಿ ಪೆರಡಾಲ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಿರ್ವಿಘ್ನವಾಗಿ ಸಾಗಲಿ ಎಂದು ಹಾರೈಸಿದರು. ಈ ಸಂದರ್ಭ ಒಂದು ಮುಷ್ಟಿ ಅಕ್ಷತೆ ಮತ್ತು ನಿಧಿ ನೀಡಿ ಜೀರ್ಣೋದ್ಧಾರ ಕೆಲಸ ಕಾರ್ಯಗಳಿಗೆ ಆರ್ಥಿಕ ಸಂಪತ್ತು ಶೀಘ್ರವಾಗಿ ಹರಿದುಬರಲಿ, ಬ್ರಹ್ಮ ಕಲಶ ವೈಭವದಿಂದ ನಡೆಯಲು ಶ್ರೀ ಮಹಾಲಕ್ಷ್ಮಿ ಅನುಗ್ರಹಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಹಾಗೂ ಅಕ್ಷತೆ ನೀಡಿ ಹರಸಿದರು. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಆಡಳಿತ ಮಂಡಳಿ ಮೊಕ್ತೇಸರ ಪಿ. ಜಿ.ಜಗನ್ನಾಥ ರೈ , ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಜತೆ ಕಾರ್ಯದರ್ಶಿ ಗಣೇಶ್ ಭಟ್ ಕಡಪ್ಪು, ಜೀರ್ಣೋದ್ಧಾರ ಸಮಿತಿ ಲೆಕ್ಕಪರಿಶೋಧಕ ಕುಂಞಣ್ಣ ಬದಿಯಡ್ಕ, ಯುವ ಸಮಿತಿ ಕಾರ್ಯದರ್ಶಿ ಭಾಸ್ಕರ ಪಂಜಿತಡ್ಕ ಉಪಸ್ಥಿತರಿದ್ದರು.