ಕುಂಬಳೆ: ಲೋಕಸೇವಾ ಆಯೋಗ ಕನ್ನಡಿಗರ ತಾಳ್ಮೆಯಲ್ಲಿ ಆಟವಾಡುವುದು ಮುಂದುವರಿದಿದೆ. ಇತ್ತೀಚೆಗೆ ನಡೆದ ಯುಪಿ ಶಾಲಾ ಅಧ್ಯಾಪಕ (ಮಾಧ್ಯಮಿಕ ತರಗತಿ ಕನ್ನಡ ಮಾಧ್ಯಮ) ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಗಳೇ ಅರ್ಥವಾಗದ ರೀತಿಯಲ್ಲಿ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ಆಯ್ಕೆಯಲ್ಲಿರುವ ಉತ್ತರಗಳು ಅರ್ಥವಾಗುವಂತಿರಲಿಲ್ಲ. ಕನ್ನಡಿಗರನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೂ ಕನ್ನಡ ಅಭ್ಯರ್ಥಿಗಳು ಆಯ್ಕೆಯಾಗಬಾರದು ಎಂಬ ಉದ್ದೇಶದಿಂದ ಇಂತಹ ಪ್ರಶ್ನೆ ಪತ್ರಿಕೆ ತಯಾರಿಸಿದಂತಿದೆ. ಅಸಂಬದ್ಧ ಪ್ರಶ್ನೆಪತ್ರಿಕೆಗಳನ್ನು ತಯಾರಿಸುತ್ತಿರುವುದು ಶೈಕ್ಷಣಿಕ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ. ಪಿಎಸ್‍ಸಿ ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಸುವಾಗ ಎಚ್ಚರ ವಹಿಸಬೇಕಾದ ತಜ್ಞರು ಇಷ್ಟೊಂದು ದೊಡ್ಡ ತಪ್ಪುಗಳನ್ನು ಮಾಡಿರುವುದು ಅಕ್ಷಮ್ಯ. ಅಲ್ಲದೆ ಇತ್ತೀಚಿಗಷ್ಟೇ ನಡೆದ ಲ್ಯಾಬ್ ಅಸಿಸ್ಟೆಂಟ್ ಹುದ್ದೆಯ ಪರೀಕ್ಷೆಗೆ ಕನ್ನಡ ಪ್ರಶ್ನೆ ಪತ್ರಿಕೆಗಳು ಲಭಿಸಿರಲಿಲ್ಲ. ಇವೆಲ್ಲವನ್ನು ಕನ್ನಡಿಗರು ಸಹಿಸಿಕೊಂಡು ಹೋಗಬೇಕಾಗಿರುವುದು ಗಡಿನಾಡ ಕನ್ನಡಿಗರ ಮೇಲಿನ ದಬ್ಬಾಳಿಕೆ ಎನ್ನದೆ ವಿಧಿಯಿಲ್ಲ ಎಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘಟನೆಯ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ರಾವ್ ಅಭಿಪ್ರಾಯ ಪಟ್ಟರು.
ಈ ಮೊದಲು ನಡೆದ ಎಚ್.ಎಸ್.ಟಿ., ಎಲ್.ಪಿ.ಎಸ್.ಟಿ. ಹುದ್ದೆಯ ಪರೀಕ್ಷೆಗಳಲ್ಲೂ ಈ ರೀತಿ ಪ್ರಶ್ನೆ ಪತ್ರಿಕೆಯಲ್ಲಿ ದೋಷಗಳು ಕಂಡುಬಂದಿದ್ದವು. ಇದು ಉದ್ದೇಶಪೂರ್ವಕವೋ ಎಂಬ ರೀತಿಯಲ್ಲಿ ಸಂಭವಿಸಿವೆ. ಸರ್ಕಾರ ಭಾಷಾ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂಬ ಆರೋಪಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಪ್ರಶ್ನೆ ಪತ್ರಿಕೆಯನ್ನು ಗೂಗಲ್ ಅನುವಾದ ಬಳಸಿ ತಯಾರಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದು ಪಿಎಸ್‍ಸಿ ಯಂತಹ ಸರ್ಕಾರಿ ವ್ಯವಸ್ಥೆಗೆ ಶೋಭೆ ತರುವಂಥದ್ದಲ್ಲ. ವಿಷಯ, ಭಾಷಾ ಜ್ಞಾನವುಳ್ಳ ಸೂಕ್ತ ತಜ್ಞರನ್ನು ಬಳಸಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಬೇಕು. ಪಿಎಸ್‍ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಮಲೆಯಾಳ ಪದ ನುಸುಳಿರುವುದು ಹೊಸತೇನಲ್ಲ. ಆದರೆ ಈ ಬಾರಿ ಮನಃಶಾಸ್ತ್ರವಿಷಯದ ಹೆಚ್ಚಿನ ಪ್ರಶ್ನೆಗಳು ಮಲೆಯಾಳಮಯವಾಗಿದ್ದವು. ಪ್ರತಿಬಾರಿಯೂ ಅಸಮರ್ಪಕ ಅನುವಾದ ಕನ್ನಡ ಮಾಧ್ಯಮದ ಉದ್ಯೋಗಾರ್ಥಿಗಳಿಗೆ ಲಭಿಸುತ್ತಿರುವುದನ್ನು ಸಂಘಟನೆಯ ಕೇಂದ್ರ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ಕೂಲಂಕಷವಾಗಿ ಚರ್ಚಿಸಿ ತೀವ್ರ ಖಂಡನೆಯನ್ನು ವ್ಯಕ್ತಪಡಿಸಲಾಯಿತು.
950ಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪ್ರಶ್ನೆಪತ್ರಿಕೆ ಅಸಮರ್ಪಕವಾಗಿರುವುದ ರಿಂದ ಮರು ಪರೀಕ್ಷೆ ನಡೆಸಬೇಕು, ಮಲೆಯಾಳ ಆರ್ಥದ ಪ್ರಶ್ನೆಗಳನ್ನು ತೆಗೆದು ಸರಿಯಾದ ಪ್ರಶ್ನೆಗಳನ್ನಷ್ಟೇ ಪರಿಗಣಿಸಬೇಕು ಎಂದು ಕನ್ನಡ ಅಧ್ಯಾಪಕರ ಸಂಘಟನೆಯು ಒತ್ತಾಯಿಸಿತು.
ಸಭೆಯಲ್ಲಿ ಅಧಿಕೃತ ವಕ್ತಾರರಾದ ಸುಕೇಶ್, ಕೇಂದ್ರ ಸಮಿತಿ ಕಾರ್ಯದರ್ಶಿ ಜಯಪ್ರಶಾಂತ್, ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ, ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಜಯರಾಮ್, ಬೇಕಲ ಉಪಜಿಲ್ಲಾ ಅಧ್ಯಕ್ಷೆ ರಜನಿ ಹಾಗೂ ಪದಾಧಿಕಾರಿಗಳಾದ ಕುಶ, ರೋಹಿತಾಕ್ಷಿ, ವಿನೋದ್, ರಾಜು ಕಿದೂರ್, ಜೀವನ್ ಕುಮಾರ್, ಸೌಮ್ಯ ಮಯ್ಯ, ಧನ್ಯಶ್ರೀ, ಕವಿತಾ ಕೂಡ್ಲು, ಶ್ರೀಲತಾ, ವಿಜಯ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಶರತ್ ಕುಮಾರ್ ವಂದಿಸಿದರು.