ನವದೆಹಲಿ :ಭಾರತೀಯ ರಿಸರ್ವ್ ಬ್ಯಾಂಕ್ ಸತತ ಏಳನೆಯ ಬಾರಿ ತನ್ನ ಈ ಹಿಂದಿನ ಶೇ. 6.5 ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ನಿರ್ಧಾರವನ್ನು ದ್ವೈಮಾಸಿಕ ಆರ್ಥಿಕ ನೀತಿ ಸಮಿತಿಯ ಸಭೆಯಲ್ಲಿ 5:1ರ ಬಹುಮತದ ಆಧಾರದಲ್ಲಿ ಕೈಗೊಳ್ಳಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ರೆಪೊ ದರದ ಯಥಾಸ್ಥಿತಿಯೆಂದರೆ, ಸಾಲದ ಮೇಲಿನ ಬಡ್ಡಿ ದರ ಕೂಡಾ ಯಥಾಸ್ಥಿತಿಯಲ್ಲೇ ಮುಂದುವರಿಯುವ ಸಾಧ್ಯತೆ ಇದೆ.
ಹಣದುಬ್ಬರವು ನಿಗದಿತ ಗುರಿಯತ್ತ ಸಮೀಪಿಸುತ್ತಿದೆ ಎಂದು ಹೇಳಿದ ಶಕ್ತಿಕಾಂತ್ ದಾಸ್, ಚಿಲ್ಲರೆ ಹಣದುಬ್ಬರ ದರದ ಮುನ್ನೋಟವು ಶೇ. 4.5ರಷ್ಟಾಗಿದ್ದು, ಪ್ರಮುಖ ಹಣದುಬ್ಬರವು ಕಳೆದ ಒಂಬತ್ತು ತಿಂಗಳಿನಿಂದ ಸ್ಥಿರವಾಗಿ ಇಳಿಕೆಯಾಗುತ್ತಿದೆ. ಇಂಧನ ಸಾಧನಗಳ ಹಣದುಬ್ಬರವು ಸತತ ಆರನೆಯ ತಿಂಗಳೂ ಋಣಾತ್ಮಕ ದರ ಹೊಂದಿದೆ ಎಂದು ಹೇಳಿದ್ದಾರೆ.
ದೃಢವಾದ ಪ್ರಗತಿಯ ಮುನ್ನೋಟವು ಹಣದುಬ್ಬರದ ಮೇಲೆ ಗಮನ ನೆಡಲು ಅವಕಾಶ ಒದಗಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಹೀಗಿದ್ದೂ, ಆಹಾರ ಪದಾರ್ಥಗಳ ಬೆಲೆಗಳಲ್ಲಿನ ಅನಿಶ್ಚಿತತೆಯು ಸವಾಲೊಡ್ಡುವುದನ್ನು ಮುಂದುವರಿಸಿದೆ ಎಂದು ಹೇಳಿದ ಅವರು, ಹಣದುಬ್ಬರದ ಏರಿಕೆಯು ಹಣದುಬ್ಬರ ತಗ್ಗಿಸುವ ಪ್ರಯತ್ನವನ್ನು ಹಳಿ ತಪ್ಪಿಸುವ ಸಾಧ್ಯತೆ ಇರುವುದರಿಂದ ಆರ್ಥಿಕ ನೀತಿ ಸಮಿತಿಯು ಈ ಅಪಾಯದ ಬಗ್ಗೆ ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಹೇಳಿದ್ದಾರೆ.
"ಆಹಾರ ಪದಾರ್ಥಗಳ ಹಣದುಬ್ಬರವು ಗಮನಾರ್ಹ ಚಂಚಲತೆ ಪ್ರದರ್ಶಿಸುವುದನ್ನು ಮುಂದುವರಿಸಿದ್ದು, ಹಣದುಬ್ಬರ ತಗ್ಗಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ" ಎಂದು ಶಕ್ತಿಕಾಂತ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ.