ಕಣ್ಣೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ಬಗ್ಗೆ ನೀಡಿದ ಹೇಳಿಕೆ ಕುರಿತಂತೆ ಚುನಾವಣಾ ಆಯೋಗವು ಪಕ್ಷಾತೀತವಾಗಿ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕಣ್ಣೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ಬಗ್ಗೆ ನೀಡಿದ ಹೇಳಿಕೆ ಕುರಿತಂತೆ ಚುನಾವಣಾ ಆಯೋಗವು ಪಕ್ಷಾತೀತವಾಗಿ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಇದು ಶೀಘ್ರ ಕ್ರಮ ಜರುಗಿಸಬೇಕಾದ ಸಮಯ. ಆದರೆ, ಚುನಾವಣಾ ಆಯೋಗ ಈಗಲೂ ಮೌನವಾಗಿದೆ ಎಂದು ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ಶೀಘ್ರ ಕ್ರಮ ಕೈಗೊಳ್ಳುವ ಮೂಲಕ ಪಕ್ಷಾತೀತವಾಗಿದ್ದೇವೆ ಎಂದು ಚುನಾವಣಾ ಆಯೋಗ ತೋರಿಸಬೇಕಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದು ಸುಪ್ರೀಂ ಕೋರ್ಟ್ ಗಮನಕ್ಕೆ ತರಲೇಬೇಕಾದ ವಿಷಯ. ಮೋದಿಯವರ ಆ ಹೇಳಿಕೆ ದೇಶದಲ್ಲಿ ಬಿಜೆಪಿ ವಿರೋಧಿ ಶಕ್ತಿಯನ್ನು ಮತ್ತಷ್ಟು ಬಲಿಷ್ಠವಾಗಿಸಿದ್ದು, ಕೇಸರಿ ಪಕ್ಷವು ಹೀನಾಯ ಸೋಲು ಕಾಣಲಿದೆ ಎಂದಿದ್ದಾರೆ.
ಭಾನುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ ಎಂದು ಹೇಳಿದ್ದರು.
ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ನೀಡಲು ಕಾಂಗ್ರೆಸ್ ಯೋಜಿಸಿದೆ ಎಂದು ಆರೋಪಿಸಿದ್ದರು.
ಮೋದಿಯವರ ಈ ಹೇಳಿಕೆಯನ್ನು ಟೀಕಿಸಿದ ವಿಜಯನ್, ಜನರಲ್ಲಿ ಮುಸ್ಲಿಂ ವಿರೋಧಿ ದ್ವೇಷವನ್ನು ಹುಟ್ಟುಹಾಕಲು ಕಟ್ಟುಕಥೆ ಹೇಳುವ ಮೂಲಕ ಪ್ರಧಾನಿ ದ್ವೇಷದ ಪ್ರಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.