ನವದೆಹಲಿ: ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿಯು ಸೋಮವಾರ ಮೊದಲ ಬಾರಿಗೆ ಸಭೆ ಸೇರಿದ್ದು, 'ವಿಕಸಿತ ಭಾರತ'ದ ಕಾರ್ಯಸೂಚಿಗೆ ನೀಲನಕ್ಷೆ ರೂಪಿಸುವ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಸಿತು. ಸಭೆಯಲ್ಲಿ ಎಂಟು ಮಂದಿ ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಇತರ ಮುಖಂಡರು ಲೋಕಸಭಾ ಚುನಾವಣೆಯ ಪ್ರಮುಖ ಭರವಸೆಗಳ ಬಗ್ಗೆ ಮಾತುಕತೆ ನಡೆಸಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಿಸ್ಡ್ ಕಾಲ್ ಸೇವೆಯ ಮೂಲಕ ಪಕ್ಷವು 3.75 ಲಕ್ಷಕ್ಕೂ ಹೆಚ್ಚು ಮತ್ತು 'ನಮೋ' ಆಯಪ್ ಮೂಲಕ ಸುಮಾರು 1.70 ಲಕ್ಷದಷ್ಟು ಸಲಹೆಗಳನ್ನು ಸ್ವೀಕರಿಸಿದೆ. ಜನರಿಂದ ಸ್ವೀಕರಿಸಿದ ಎಲ್ಲ ಸಲಹೆಗಳನ್ನು ವಿವಿಧ ವಿಭಾಗಗಳ ಅಡಿ ವರ್ಗೀಕರಿಸಿ, ಸಮಿತಿಯ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ತಿಳಿಸಿದರು.
ಸಮಿತಿಯ ಸಹ ಸಂಚಾಲಕರೂ ಆಗಿರುವ ಗೋಯಲ್, ದೇಶದ 3,500 ವಿಧಾನಸಭಾ ಕ್ಷೇತ್ರಗಳಲ್ಲಿ 916 ವಿಡಿಯೊ ವ್ಯಾನ್‌ಗಳು ಜನರನ್ನು ಸಂಪರ್ಕಿಸುತ್ತಿದ್ದು, ಪ್ರಣಾಳಿಕೆಗಾಗಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿವೆ ಎಂದು ಹೇಳಿದರು.
ಬಿಜೆಪಿಯು 27 ಮಂದಿಯ ಪ್ರಣಾಳಿಕೆ ಸಮಿತಿಯನ್ನು ಶನಿವಾರ ಘೋಷಿಸಿತ್ತು.