ಗ್ಯಾಸ್ ಸ್ಟೌ ಇಲ್ಲದ ಮನೆಗಳು ಇಂದೀಗ ಅತಿ ವಿರಳ. ನಾವು ಯಾವುದೇ ರೀತಿಯ ಸಮಾರಂಭಗಳ ಅಡುಗೆಗಳಿಗೂ ಈಗ ಹೆಚ್ಚಾಗಿ ಗ್ಯಾಸ್ ಸ್ಟೌವ್ ಅನ್ನು ಅವಲಂಬಿಸುತ್ತೇವೆ.
ಪ್ರತಿ ಮನೆಯವರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಇದೂ ಒಂದು, ಪ್ರತಿನಿತ್ಯ ಒಲೆ ಬಳಸಿದಾಗ, ಬರ್ನರ್‍ಗಳಲ್ಲಿ ಇದ್ದಿಲು ಅಥವಾ ಮಸಿ ತುಂಬಿಕೊಳ್ಳುವುದು.
ಬರ್ನರ್ ಮುಚ್ಚಿಹೋಗುವುದರಿಂದ ಬೆಂಕಿ ಅಥವಾ ಜ್ವಾಲೆ ಸರಿಯಾಗಿ ಉರಿಯುವುದಿಲ್ಲ ಮತ್ತು ತ್ವರಿತವಾಗಿ ಗ್ಯಾಸ್ ಖಾಲಿಯಾಗುತ್ತದೆ. ನಾವು ಎಷ್ಟೇ ಒರೆಸಿದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸುವಲ್ಲಿ ಸೋತೇ ಸೋಲುತ್ತೇವೆ. ಇದು ಬಳಿಕ ಹೊಸ ಬರ್ನರ್ ಖರೀದಿಸುವಲ್ಲಿಗೆ ತಲುಪುತ್ತದೆ. ಆಗಾಗ ಬದಲಿಸುವುದು ಎಲ್ಲರಿಗೂ ಅಷ್ಟು ಸುಲಭವೇನೂ ಅಲ್ಲ. ಹಾಗಾದರೆ ಬರ್ನರ್ ಗಳನ್ನು ಸುಲಭವಾಗಿ ಕ್ಲೀನ್ ಮಾಡುವುದು ಹೇಗೆ..? ಅದಕ್ಕಾಗಿ ಈ ವಿಧಾನವನ್ನು ಪ್ರಯತ್ನಿಸೋಣ..
ಒಂದು ಬಟ್ಟಲಿನಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆಹಣ್ಣಿನ ರಸ, ಸ್ವಲ್ಪ ಅಡಿಗೆ ಸೋಡಾ, ಸಣ್ಣ ಪ್ಯಾಕೆಟ್ ಎನೋ ಮತ್ತು ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರಲ್ಲಿ ಬರ್ನರ್ ಹಾಕಿ ನಾಲ್ಕು ಗಂಟೆಗಳ ಕಾಲ ಮುಚ್ಚಿಡಿ. ನಂತರ ಬ್ರಶ್ ನಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಇದು ಎಲ್ಲಾ ಮಸಿಯನ್ನು ತೊಡೆದುಹಾಕಲು ಮತ್ತು ಬರ್ನರ್ಗೆ ಉತ್ತಮವಾದ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.
ಇನ್ನು ಸುಲಭವಾಗಿ ಅಡುಗೆ, ಆಹಾರ ತಯಾರಿ ಸಾಧ್ಯ. ಇಲ್ಲದಿದ್ದರೆ ಹೇಳಿ!