ಕೊಚ್ಚಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪಕ್ಷವು ತೀವ್ರ ವಿರೋಧ ವ್ಯಕ್ತಪಡಿಸಿದೆ. ತಮ್ಮ ಪ್ರಣಾಳಿಕೆ ಬಗ್ಗೆ ನರೇಂದ್ರ ಮೋದಿ ಅವರಿಗೆ ಅರಿವು ಮೂಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಭೇಟಿಗೆ ಸಮಯ ಕೋರಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಪ್ರಧಾನಿಗೆ ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಲೋಕಸಭಾ ಅಭ್ಯರ್ಥಿಗಳು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಗಳನ್ನು ಕಳುಹಿಸಿಕೊಡುತ್ತಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
'ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ತಕ್ಕುದಲ್ಲದ ಹೇಳಿಕೆ ನೀಡಿದ್ದಾರೆ. ಪ್ರಧಾನಿಯಾದವರು ಹೇಗೆ ಎಲ್ಲದರ ಬಗ್ಗೆ ಸುಳ್ಳು ಹೇಳಲು ಮತ್ತು ಸುಳ್ಳು ಸುದ್ದಿ ಹಬ್ಬಿಸಲು ಸಾಧ್ಯ? ಅವರು ದೇಶದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವವರು ಎನ್ನುವುದು ಭಾನುವಾರ ಆಡಿದ ಮಾತುಗಳಿಂದ ಸ್ಪಷ್ಟವಾಗಿದೆ' ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಮ್ಮ ಪ್ರಣಾಳಿಕೆಯಲ್ಲಿ ಇಲ್ಲದೇ ಇರುವುದನ್ನು ಹೇಳುವ ಮೂಲಕ ಚುನಾವಣಾ ಲಾಭಕ್ಕಾಗಿ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸಿದ್ದಾರೆ' ಎಂದು ಆರೋಪಿಸಿದರು.
ಇದೇ ವೇಳೆ ಅವರು ಚುನಾವಣಾ ಆಯೋಗದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು.
'ಎಲ್ಲದರ ಬಗ್ಗೆಯೂ ಸುಳ್ಳು ಹೇಳುವುದಕ್ಕೆ ಚುನಾವಣಾ ಆಯೋಗವು ಪ್ರಧಾನಿಗೆ ಅನುಮತಿ ನೀಡಿದೆಯೇ? ಪ್ರತಿಯೊಂದರಲ್ಲಿಯೂ ಮಧ್ಯಪ್ರವೇಶ ಮಾಡುವ ಆಯೋಗವು, ಈ ವಿಚಾರದಲ್ಲಿ ಮೌನವಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಾದ ಆಯೋಗ ಈ ಬಗ್ಗೆ ಮೌನ ತಾಳಿರುವುದೇಕೆ? ದ್ವೇಷ ಭಾಷಣಗಳ ಇತಿಹಾಸದಲ್ಲಿಯೇ ಪ್ರಧಾನಿ ಅತ್ಯಂತ ಕೆಟ್ಟ ದ್ವೇಷ ಭಾಷಣ ಮಾಡಿರುವಾಗ, ಚುನಾವಣಾ ಆಯೋಗವು ಏನು ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ತಿಳಿಯಲು ನಾನು ಬಯಸುತ್ತೇನೆ' ಎಂದು ಹೇಳಿದರು.
'ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹಿಂಸಾಚಾರ ಕೆರಳಿಸಲು ಮತ್ತು ದೇಶವನ್ನು ವಿಭಜನೆ ಮಾಡಲು ಸಾರ್ವಜನಿಕವಾಗಿ ಕರೆ ನೀಡಲಾಗಿದೆ. ಮೊದಲ ಹಂತದ ಮತದಾನ ಮುಗಿದ ನಂತರ ಪರಿಸ್ಥಿತಿ ತಮಗೆ ಅನುಕೂಲಕರವಾಗಿಲ್ಲ ಎನ್ನುವುದನ್ನು ಅರಿತು ಪ್ರಧಾನಿ ಕೀಳು ಮಟ್ಟದ ತಂತ್ರಗಳ ಮೊರೆ ಹೋಗಿದ್ದಾರೆ' ಎಂದು ಆರೋಪಿಸಿದರು.
ಇದು ಅತ್ಯಂತ ಕ್ರೂರವಾದದ್ದು. ಚುನಾವಣಾ ಆಯೋಗದ ಮೌನ ಅದಕ್ಕಿಂತಲೂ ಕ್ರೂರ. ಮೋದಿ ಅವರ ಪ್ರಚೋದನಕಾರಿ ಮಾತು ನೀತಿಸಂಹಿತೆ ಮತ್ತು ದ್ವೇಷ ಭಾಷಣದ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಉಲ್ಲಂಘನೆ. ಕೋರ್ಟ್, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಮೋದಿ ಅವರಿಗೆ ನ್ಯಾಯಾಲಯದ ನಿಂದನೆಯ ನೋಟಿಸ್ ಜಾರಿ ಮಾಡಿ, ಶಿಕ್ಷೆ ವಿಧಿಸುತ್ತದೆ ಎಂದು ಭಾವಿಸಿದ್ದೇನೆ.
ಸೀತಾರಾಮ್ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
ಇದು ಯಾವ ರೀತಿಯ ಸಂಸ್ಕೃತಿ? ನೀವು ರಾಮ ಮಂದಿರದ ಬಗ್ಗೆ ಮಾತನಾಡುತ್ತೀರಿ, ಮಂದಿರ ಉದ್ಘಾಟಿಸುತ್ತೀರಿ, ರಾಮನ ಆದರ್ಶಗಳ ಬಗ್ಗೆ ಮಾತನಾಡುತ್ತೀರಿ. ಮತ್ತೊಂದು ಕಡೆ ದ್ವೇಷವನ್ನು ಹರಡುತ್ತೀರಿ. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಎಲ್ಲಿದೆ? ನೀವು ದ್ವೇಷದ ಪ್ರತಿಪಾದಕರಾಗಿ ಭಾರತವನ್ನು ಮುನ್ನಡೆಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಮೋದಿ ವಿರುದ್ಧ ಪ್ರಕರಣ ದಾಖಲಿಸಬೇಕು.
ಕಪಿಲ್ ಸಿಬಲ್, ರಾಜ್ಯಸಭಾ ಸದಸ್ಯ
ಅಧಿಕಾರಕ್ಕಾಗಿ ಸುಳ್ಳು ಹೇಳುವುದು, ವಿಷಯಗಳ ಬಗ್ಗೆ ತಪ್ಪು ಉಲ್ಲೇಖ ಮಾಡುವುದು, ವಿರೋಧಿಗಳ ಬಗ್ಗೆ ಸುಳ್ಳು ಆರೋಪ ಮಾಡುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ತರಬೇತಿಯ ವಿಶೇಷತೆ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಪ್ರಣಾಳಿಕೆಯಲ್ಲಿ ಎಲ್ಲಿಯಾದರೂ ಹಿಂದು ಮುಸ್ಲಿಂ ಎಂದು ಬರೆದಿದ್ದರೆ ತೋರಿಸಿ ಎಂದು ಪ್ರಧಾನಿಗೆ ಸವಾಲು ಹಾಕುತ್ತೇನೆ. ಇಂಥ ಸಣ್ಣ ಬುದ್ಧಿ ನಿಮ್ಮ ರಾಜಕೀಯ ಮೌಲ್ಯಗಳಲ್ಲಿಯೇ ಇದೆ
-ಪವನ್ ಖೇರಾ ಕಾಂಗ್ರೆಸ್ ಪ್ರಚಾರ ವಿಭಾಗದ ಮುಖ್ಯಸ್ಥ
ಮೊದಲ ಹಂತದ ಮತದಾನದ ನಂತರ ಮೋದಿ ನಿರಾಸೆಗೊಂಡಿದ್ದಾರೆ. ಅವರ ಸುಳ್ಳಗಳ ಮಟ್ಟವು ವಿಪರೀತ ಕುಸಿದಿದ್ದು ಭಯಗೊಂಡಿರುವ ಅವರು ಜನರ ಗಮನ ಬೇರೆಡೆ ಸೆಳೆಯಲು ಬಯಸುತ್ತಿದ್ದಾರೆ
-ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಮೊದಲ ಹಂತ ಅವರಿಗೆ ಕೆಟ್ಟದಾಗಿತ್ತು ಎನ್ನುವುದು ನಮಗೆ ಗೊತ್ತಾಗುತ್ತಿದೆ. ಪ್ರಧಾನಿ ಅಧಿಕಾರ ಕಳೆದುಕೊಳ್ಳುವ ನಿರಾಸೆ ಮತ್ತು ಹತಾಶೆಯಿಂದ ಮಾನಸಿಕ ಹತೋಟಿ ಕಳೆದುಕೊಂಡಂತೆ ಕಾಣುತ್ತಿದೆ -ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಪ್ರಧಾನಿ ಮೋದಿ ಅವರ ಹೇಳಿಕೆ ವಿಭಜಕ ದುರುದ್ದೇಶಪೂರಿತ ಮತ್ತು ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿ ಮಾಡಿಕೊಂಡದ್ದಾಗಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಪ್ರಧಾನಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಿಯೋಗವು ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದೆ. ಕಾಂಗ್ರೆಸ್ ನಿಯೋಗವು ಬಿಜೆಪಿ ವಿರುದ್ಧ 16 ದೂರುಗಳನ್ನು ಸಲ್ಲಿಸಿದ್ದು ಆಡಳಿತಾರೂಢ ಪಕ್ಷದ ವಿರುದ್ಧ ತಕ್ಷಣವೇ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದೆ. ಈ ವಿಚಾರದಲ್ಲಿ ಆಯೋಗವು ನಿಷ್ಕ್ರಿಯತೆಯಿಂದಿದ್ದರೆ ಅದು ಆಯೋಗದ ಪರಂಪರೆಗೆ ಕಳಂಕ ತರುತ್ತದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ.