ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾದ ಅಣಕು ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ(ಇವಿಎಂ) ದಾಖಲಾದ ಮತವು ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿದೆ ಎಂದು ಸಿಪಿಐ(ಎಂ) ನೇತೃತ್ವದ ಎಲ್‍ಡಿಎಫ್ ಆರೋಪಿಸಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಪಕ್ಷದ ಪ್ರಮುಖರು ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಸಿಪಿಐ(ಎಂ) ಹಿರಿಯ ನಾಯಕ ಕೆ.ಪಿ. ಸತೀಶ್ ಚಂದ್ರನ್, ಬುಧವಾರ ನಡೆದ ಅಣಕು ಮತದಾನದ ವೇಳೆ ಎರಡು ಮೂರು ಮತಯಂತ್ರಗಳಲ್ಲಿ ಆ ರೀತಿಯ ದೋಷ ಕಂಡುಬಂದಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
ಏಪ್ರಿಲ್ 26ರಂದು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಸಿಪಿಐ(ಎಂ)ನಿಂದ ಎಂ.ವಿ. ಬಾಲಕೃಷ್ಣನ್, ಕಾಂಗ್ರೆಸ್ ನಾಯಕ ಮತ್ತು ಹಾಲಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಯುಡಿಎಫ್ ನಿಂದ ಹಾಗೂ ಬಿಜೆಪಿಯಿಂದ ಎಂ.ಎಲ್. ಅಶ್ವಿನಿ ಸ್ಪರ್ಧಿಸಿದ್ದಾರೆ.