ಕಾಸರಗೋಡು: ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಅವರು ಚುನಾವಣಾ ಸಾಮಗ್ರಿಗಳ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಜಂಟಿ ತಪಾಸಣೆ ನಡೆಸಿದರು.
ಮಂಜೇಶ್ವರಂ ಕ್ಷೇತ್ರದ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಮಂಡಲದ ಕಾಸರಗೋಡು ಸರ್ಕಾರಿ ಕಾಲೇಜು, ಉದುಮ ಮಂಡಲದ ಚೆಮ್ನಾಡು ಜಮಾ ಅತ್ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ಮಂಡಲದ ದುರ್ಗಾ ಹೈಯರ್ ಸೆಕೆಂಡರಿ ಶಾಲೆ ಮತ್ತು ತ್ರಿಕರಿಪುರ ಮಂಡಲದ ಸ್ವಾಮಿ ನಿತ್ಯಾನಂದ ಆಂಗ್ಲ ಮಾಧ್ಯಮ ಶಾಲೆಗೆ ಜಿಲ್ಲಾಧಿಕಾರಿ ಮತ್ತು ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದರು. ಈ ಸಂದರ್ಭ ಸ್ಟ್ರಾಂಗ್ ರೂಂಗಳನ್ನು ಪರಿಶೀಲಿಸಲಾಯಿತು. ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಮತಗಟ್ಟೆ ಸಾಮಗ್ರಿ ವಿತರಣೆಗೆ ಅನುಕೂಲ ಮಾಡಿಕೊಡುವಂತೆ ಉಪ ಚುನಾವಣಾಧಿಕಾರಿಗಳು ಹಾಗೂ ಇಆರ್‍ಒಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಹಾಯಕ ಚುನಾವಣಾಧಿಕಾರಿಗಳಾದ ಪಿ. ಬಿನುಮೋನ್, ಸುಫಿಯಾನ್ ಅಹಮದ್, ಪಿ. ಶಾಜು, ಇಆರ್‍ಒ ಪಿ. ಶಿಬು, ಎಂ. ಮಾಯಾ ಹಾಗೂ ಪಿ.ಎಂ.ಅಬೂಬಕರ್ ಸಿದ್ದೀಕ್ ಜತೆಗಿದ್ದರು.