ನವದೆಹಲಿ: ಉತ್ತರಾಧಿಕಾರ ಕುರಿತಂತೆ ಇಸ್ಲಾಂ ಮೇಲೆ ನಂಬಿಕೆ ಇಲ್ಲದವರು 'ಮುಸಲ್ಮಾನರ ವೈಯಕ್ತಿಕ ಕಾನೂನು, 1937ರ ಷರಿಯತ್ ಕಾಯ್ದೆ' ಅನ್ವಯವಾಗುವುದೇ ಅಥವಾ ಈ ನೆಲದ ಜಾತ್ಯತೀತ ಕಾಯ್ದೆಗಳು ಅನ್ವಯವಾಗಲಿವೆಯೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ತೀರ್ಮಾನಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ಪೀಠವು ಈ ಸಂಬಂಧ ಕೇಂದ್ರ ಸರ್ಕಾರ ಹಾಗೂ ಅರ್ಜಿದಾರರಾದ ಕೇರಳದ ಮಹಿಳೆ ಸೋಫಿಯಾ ಪಿ.ಎಂ ಅವರಿಗೆ ನೋಟಿಸ್ ಜಾರಿ ಮಾಡಿತು. 'ಇದು, ಬಹುಮುಖ್ಯವಾದ ಪ್ರಶ್ನೆ' ಎಂದೂ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿದಾರರ ಪರ ವಕೀಲ ಪ್ರಶಾಂತ್ ಪದ್ಮನಾಭನ್ ಅವರ ಪ್ರಾಥಮಿಕ ವಾದ ಆಲಿಸಿದ ಬಳಿಕ ಪೀಠ, ಈ ಕುರಿತು ಕೋರ್ಟ್‌ಗೆ ಸಹಕರಿಸಲು ನ್ಯಾಯಾಂಗ ಅಧಿಕಾರಿ ನೇಮಿಸಬೇಕು ಎಂದು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರಿಗೆ ತಿಳಿಸಿತು.
'ಮುಸ್ಲಿಂ ವೈಯಕ್ತಿಕ ಕಾನೂನು ನಿಮಗೆ ಅನ್ವಯವಾಗುವುದಿಲ್ಲ ಎಂಬ ಘೋಷಣೆ ನಿಮಗೆ ಬೇಕೆ? ನಿಮಗೆ ಘೋಷಣೆ ಅಗತ್ಯವಿಲ್ಲ. ಏಕೆಂದರೆ, ಷರಿಯತ್ ಕಾಯ್ದೆ ಸೆಕ್ಷನ್ 3ರ ಪ್ರಕಾರ, ನೀವು ಸ್ವತಃ ಘೋಷಿಸಿಕೊಳ್ಳದಿದ್ದಲ್ಲಿ ಉಯಿಲು, ದತ್ತು, ಉತ್ತರಾಧಿಕಾರ ಕುರಿತಂತೆ ವೈಯಕ್ತಿಕ ಕಾಯ್ದೆ ಅನ್ವಯವಾಗದು. ನೀವು ಅಥವಾ ನಿಮ್ಮ ತಂದೆ ಈ ಘೋಷಣೆ ಮಾಡಿಕೊಳ್ಳದಿದ್ದಲ್ಲಿ ವೈಯಕ್ತಿಕ ಕಾಯ್ದೆಗೆ ವ್ಯಾಪ್ತಿಗೆ ನೀವು ಒಳಪಡುವುದಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.
ಆದರೆ, ಇಲ್ಲೊಂದು ಸಮಸ್ಯೆಯೂ ಇದೆ. ನೀವು ಘೋಷಣೆ ಮಾಡದೇ ಇದ್ದರೂ, ನಿಮಗೆ ಜಾತ್ಯತೀತ ಕಾಯ್ದೆಗಳು ಅನ್ವಯ ಆಗುವುದಿಲ್ಲ ಎಂಬ ಅಂಶವೂ ಊರ್ಜಿತವಾಗಲಿವೆ ಎಂದು ಪೀಠವು ಅಭಿಪ್ರಾಯಪಟ್ಟಿತು.
'ನನ್ನ ಕಕ್ಷಿದಾರರಿಗೆ ಮುಕ್ತ ಆಯ್ಕೆ ಇದ್ದು, ಅವರಿಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎಂಬ ಹಕ್ಕು ಉಳ್ಳವರಾದಾಗ, ಅವರಿಗೆ ವೈಯಕ್ತಿಕ ಕಾಯ್ದೆಯು ಅನ್ವಯವಾಗಬಾರದು' ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದರು.
ಒಂದು ಹಂತದಲ್ಲಿ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವ ಕುರಿತು ಸಹಮತ ವ್ಯಕ್ತಪಡಿಸದ ಪೀಠವು, 'ಎಲ್ಲಿಯವರೆಗೆ ವ್ಯಕ್ತಿ ಉಯಿಲು ಅನ್ನು ಮುಸ್ಲಿಂ ವೈಯಕ್ತಿಕ ಕಾಯ್ದೆ (ಷರಿಯತ್) ಅರ್ಜಿ ಕಾಯ್ದೆ 1937ರ ಸೆಕ್ಷನ್ 3ರ ಅನ್ವಯ ಘೋಷಿಸದಿದ್ದಲ್ಲಿ, ಈ ಕಾಯ್ದೆಯಡಿ ಅವರ ನಿರ್ವಹಣೆ ಮಾಡಲಾಗದು ಎಂದು ಹೇಳಿತು.
'ಈ ಅರ್ಜಿಯ ಮೂಲಕ ಬಹುಮುಖ್ಯ ಪ್ರಶ್ನೆಯನ್ನು ಎತ್ತಲಾಗಿರುವ ಕಾರಣ, ಈ ವಿಷಯದಲ್ಲಿ ಕೋರ್ಟ್‌ನ ಮಧ್ಯ ಪ್ರವೇಶವು ಅಗತ್ಯವಾಗಿದೆ' ಎಂದು ವಕೀಲ ಪದ್ಮನಾಭನ್ ಅವರು ಪೀಠದ ಗಮನ ಸೆಳೆದರು.
ಆಗ, ಈ ಅರ್ಜಿಯನ್ನು ಓದುವಾಗ, ಇದೆಂತಹ ಅರ್ಜಿ ಎಂದು ಭಾವಿಸಿದೆವು. ಆದರೆ, ಬಳಿಕ ಮುಖ್ಯವಾದ ಅಂಶ ಗುರುತಿಸಿದೆವು. ನಾವು ನೋಟಿಸ್ ಜಾರಿ ಮಾಡುತ್ತೇವೆ' ಎಂದು ಅರ್ಜಿದಾರರ ಪರ ವಕೀಲರಿಗೆ ಪೀಠ ಪ್ರತಿಕ್ರಿಯಿಸಿತು.
ಅರ್ಜಿದಾರರು ಕೇರಳದ ಮಾಜಿ ಮುಸಲ್ಮಾನರ ಸಂಘದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.
ಭಾರತದಲ್ಲಿ ಜನಿಸುವ ಮುಸಲ್ಮಾನರು ಮುಸ್ಲಿಂ ವೈಯಕ್ತಿಕ ಕಾನೂನು (ಷರಿಯತ್) ಅರ್ಜಿ ಕಾಯ್ದೆ 1937ರ ವ್ಯಾಪ್ತಿಗೆ ಬರುತ್ತಾರೆ. ಷರಿಯತ್ ಕಾಯ್ದೆ ಪ್ರಕಾರ, ಇಸ್ಲಾಂ ಮೇಲೆ ನಂಬಿಕೆ ಕಳೆದುಕೊಳ್ಳುವ ವ್ಯಕ್ತಿ ಸಮುದಾಯದಿಂದ ಹೊರಗುಳಿಯುತ್ತಾರೆ. ನಂತರ ಮಹಿಳೆ ತಂದೆ-ತಾಯಿ ಆಸ್ತಿಯ ಮೇಲೆ ಯಾವುದೇ ಪಿತ್ರಾರ್ಜಿತ ಹಕ್ಕು ಹೊಂದಿರುವುದಿಲ್ಲ. ಈ ಪ್ರಕರಣದಲ್ಲಿ ಅರ್ಜಿದಾರರು, ತಾನು ಅಧಿಕೃತವಾಗಿ ಧರ್ಮದಿಂದ ಹೊರಗುಳಿದರೆ ತನ್ನ ಏಕಮಾತ್ರ ಪುತ್ರಿಗೆ ವೈಯಕ್ತಿಕ ಕಾನೂನು ಅನ್ವಯವಾಗಬಹುದೇ ಎಂಬ ಆತಂಕವನ್ನು ಹೊಂದಿದ್ದರು.