ವೈನಾಡ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನ ಕೇರಳ ಪ್ರವಾಸ ಕೈಗೊಂಡಿದ್ದ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ವೈನಾಡ್ ನಲ್ಲಿ ಬುಧವಾರ ಪ್ರದೇಶ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿ ತಾಲಾ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ ಅವರು, ರಾಹುಲ್ ಗಾಂಧಿ ಸ್ಪರ್ಧೆ ಮಾಡಿರುವ ವೈನಾಡ್ ಹಾಗೂ ಕೆಸಿ ವೇಣುಗೋಪಾಲ್ ಸ್ಪರ್ಧೆಯ ಅಲೆಪ್ಪಿ ಕ್ಷೇತ್ರಗಳಲ್ಲಿ ಗೆಲುವಿನ ಕಾರ್ಯತಂತ್ರ ಗಳ ಬಗ್ಗೆ ಚರ್ಚಿಸಿದರು. ವೈನಾಡ್ ವ್ಯಾಪ್ತಿಯ ಕಲ್ಪಟ ಶಾಸಕ ಸಿದ್ದಿಕ್, ಸುಲ್ತಾನ್ ಬತ್ತೆರಿ ಶಾಸಕ ಐಸಿ ಬಾಲಕೃಷ್ಣ ನ್, ಅಲೆಪ್ಪಿ ವ್ಯಾಪ್ತಿಯ ಅರೂರ್, ಚೆರ್ತಾಲಾ. ಅಲಪುರ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎ ಐ ಸಿಸಿ ಉಸ್ತುವಾರಿ ದೀಪಾ ದಾಸ್ ಮುಂಶಿ ಅವರೊಂದಿಗೂ ಸಚಿವರು ಮಾತುಕತೆ ನಡೆಸಿದರು. ದೀಪಾ ದಾಸ್ ಮುಂಶಿ ಅವರು ತೆಲಂಗಾಣ ವಿಧಾನ ಸಭೆ ಚುನಾವಣೆ ಯಲ್ಲೂ ಉಸ್ತುವಾರಿ ಯಾಗಿದ್ದಾಗ ಸಚಿವ ಜಮೀರ್ ಅಹಮದ್ ಖಾನ್ ಅಲ್ಲಿನ ಸ್ಟಾರ್ ಪ್ರಚಾರಕ ರಾಗಿ ಕಾರ್ಯ ನಿರ್ವಹಿಸಿದ್ದರು.
ಜಮೀರ್ ಅಹಮದ್ ಖಾನ್ ಅವರು ಮೂರು ದಿನಗಳ ಪ್ರವಾಸ ದಲ್ಲಿ ಕ್ಯಾಲಿ ಕಟ್ ನಲ್ಲಿ ಗ್ರಾಂಡ್ ಮುಫ್ತಿ ಶೇಕ್ ಅಬೂಬಕರ್ ಅಹಮದ್ (ಎಪಿ ಉಸ್ತಾದ್ ) ಸೇರಿದಂತೆ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ಸಮುದಾಯದ ಪ್ರಮುಖ ನಾಯಕರು ಮತ್ತು ವೈನಾಡ್ ಯುಡಿಎಫ್ ಅಧ್ಯಕ್ಷ ಕೆಕೆ ಅಹಮದ್ ಹಾಜಿ ಅವರನ್ನು ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದರು. ಇದೇ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಅವರು ಅಲೆಪ್ಪಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಎ ಐ ಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ವೈನಾಡಿನಲ್ಲಿ ಭೇಟಿ ಮಾಡಿ ಚರ್ಚಿಸಿ ದರು.
ಮಹಾರಾಷ್ಟ್ರಕ್ಕೂ ಅಹ್ವಾನ: ಮಹಾರಾಷ್ಟ್ರ ಉಸ್ತುವಾರಿ ಯೂ ಆಗಿರುವ ರಮೇಶ್ ಚೆನ್ನಿ ತಾಲಾ, ಲೋಕಸಭೆ ಚುನಾವಣೆ ಯಲ್ಲಿ ಮಹಾರಾಷ್ಟ್ರದ ಐದು ಲೋಕಸಭೆ ಕ್ಷೇತ್ರಗಳಲ್ಲಿ ಪ್ರಚಾರ ಕ್ಕೆ ಆಗಮಿಸುವಂತೆ ಇದೇ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಆಹ್ವಾನ ನೀಡಿದರು.