ನವದೆಹಲಿ: 'ಚುನಾವಣಾ ಬಾಂಡ್‌ಗಳ ರದ್ದತಿಯಿಂದ ಕಪ್ಪು ಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಯೋಜನೆ ರದ್ದುಪಡಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಪಶ್ಚಾತಾಪ ಪಡುತ್ತಾರೆ ' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: 'ಚುನಾವಣಾ ಬಾಂಡ್‌ಗಳ ರದ್ದತಿಯಿಂದ ಕಪ್ಪು ಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಯೋಜನೆ ರದ್ದುಪಡಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಪಶ್ಚಾತಾಪ ಪಡುತ್ತಾರೆ ' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
'ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ಆದೇಶದನ್ವಯ ಫೆಬ್ರವರಿಯಲ್ಲಿ ರದ್ದು ಪಡಿಸಲಾಗಿತ್ತು.
ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸಮರ್ಥಿಸಿಕೊಂಡ ಮೋದಿ ಅವರು, ಈ ನೀತಿಯ ಬಗ್ಗೆ ಮಾಡಿದ ಆರೋಪಗಳನ್ನು ತಳ್ಳಿ ಹಾಕಿದರು.
'ವಿರೋಧ ಪಕ್ಷಗಳಿಗೂ ವಿವಿಧ ಕಂಪನಿಗಳು ದೇಣಿಗೆ ನೀಡಿವೆ' ಎಂದು ಹೇಳಿದ ಪ್ರಧಾನಿ ಅವರು, 'ಚುನಾವಣಾ ಬಾಂಡ್ ಯೋಜನೆಯು ಈ ಹಿಂದಿನ ವ್ಯವಸ್ಥೆಗಿಂತಲೂ ಅತಿ ಹೆಚ್ಚು ಪಾರದರ್ಶಕವಾಗಿತ್ತು. ಜತೆಗೆ, ಈ ನೀತಿಯನ್ನು ಸುಧಾರಿಸಲು ಅವಕಾಶವಿತ್ತು ಎಂದು ಪ್ರತಿಪಾದಿಸಿದರು.
'ನಿರ್ಧಾರಗಳನ್ನು ಕೈಗೊಳ್ಳುವಾಗ ನಾವು ಹಲವಾರು ಅಂಶಗಳನ್ನು ಕಲಿಯುತ್ತೇವೆ ಮತ್ತು ಸುಧಾರಿಸಿಕೊಳ್ಳುತ್ತೇವೆ. ಆದರೆ, ಇಂದು ನಾವು ದೇಶವನ್ನು ಕಪ್ಪು ಹಣದತ್ತ ತಳ್ಳುತ್ತಿದ್ದೇವೆ. ಇನ್ನು ಮುಂದೆ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಸಹ ಕಪ್ಪು ಹಣ ಅಥವಾ ಅಕ್ರಮ ಹಣ ಇರಬಹುದು. ಹೀಗಾಗಿಯೇ, ಪ್ರತಿಯೊಬ್ಬರು ಪಶ್ಚಾತಾಪ ಪಡುತ್ತಾರೆ ಎಂದು ನಾನು ಹೇಳುತ್ತಿದ್ದೇನೆ. ಪ್ರಾಮಾಣಿಕವಾಗಿ ಯೋಚಿಸಿದಾಗ ಎಲ್ಲರೂ ಪಶ್ಚಾತಪಡುತ್ತಾರೆ' ಎಂದರು.
'ಜಾರಿ ನಿರ್ದೇಶನಾಲಯದ (ಇಡಿ) ಒಟ್ಟು ಪ್ರಕರಣಗಳಲ್ಲಿ ಶೇ 3ರಷ್ಟು ಮಾತ್ರ ರಾಜಕೀಯ ನಾಯಕರು ಭಾಗಿಯಾಗಿದ್ದಾರೆ. ಶೇ 97ರಷ್ಟು ಪ್ರಕರಣಗಳಲ್ಲಿ ರಾಜಕೀಯಕ್ಕೆ ಸಂಬಂಧಪಡದ ವ್ಯಕ್ತಿಗಳೇ ಭಾಗಿಯಾಗಿದ್ದಾರೆ. ಇಡಿ ಮುಕ್ತವಾಗಿ ಕಾರ್ಯನಿರ್ವಹಿಸಲು ನಾವು ಅವಕಾಶ ಕಲ್ಪಿಸಬಾರದೇ' ಎಂದು ಅವರು ಪ್ರಶ್ನಿಸಿದ್ದಾರೆ.