ಸೂರ್ಯಗ್ರಹಣ ಎಂಬುದು ಭೂಗೋಳದಲ್ಲಿ ನಡೆಯುವಂಥ ಒಂದು ನೈಸರ್ಗಿಕ ವಿದ್ಯಾಮಾನವಾಗಿದೆ. 2024 ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 8ರಂದು ಉಂಟಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಯಾವುದೇ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 25ಕ್ಕೆ ಉಂಟಾಗಿತ್ತು, ಅದಾಗಿ 13ನೇ ದಿನಕ್ಕೆ ಸೂರ್ಯಗ್ರಹಣ ಸಂಭವಿಸುತ್ತಿದೆ. ಈ ಸೂರ್ಯಗ್ರಹಣದ ಸೂತಕ ಕಾಲ ಯಾವಾಗ? ಭಾರತದಲ್ಲಿ ಈ ಸೂರ್ಯಗ್ರಹಣದ ಪ್ರಭಾವ ಇದೆಯೇ, ವೈಜ್ಞಾನಿಕವಾಗಿ ನೋಡುವುದಾದರೆ ಗ್ರಹಣ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ:
2024 ರ ಮೊದಲ ಸೂರ್ಯಗ್ರಹಣ
ವರ್ಷದ ಮೊದಲ ಸೂರ್ಯಗ್ರಹಣ ಸೋಮವಾರದಂದು ಅಂದರೆ ಸೋಮಾವತಿ ಅಮವಾಸ್ಯೆಯಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಸೂರ್ಯಗ್ರಹಣವು ಏಪ್ರಿಲ್ 8 ರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 9 ರಂದು ಮುಂಜಾನೆ 2:22 ಕ್ಕೆ ಕೊನೆಗೊಳ್ಳುತ್ತದೆ.
ಈ ಸೂರ್ಯ ಗ್ರಹಣ ಎಲ್ಲಿ ಗೋಚರಿಸುತ್ತದೆ?
2024 ರ ಮೊದಲ ಸೂರ್ಯಗ್ರಹಣ ಕೆನಡಾ, ಮೆಕ್ಸಿಕೋ, ಯುನೈಟೆಡ್ ಸ್ಟೇಟ್ಸ್, ಅರುಬಾ, ಬರ್ಮುಡಾ, ಕೆರಿಬಿಯನ್ ನೆದರ್ಲ್ಯಾಂಡ್ಸ್, ಕೊಲಂಬಿಯಾ, ಕೋಸ್ಟರಿಕಾ, ಕ್ಯೂಬಾ, ಡೊಮಿನಿಕಾ, ಗ್ರೀನ್ಲ್ಯಾಂಡ್, ಐರ್ಲೆಂಡ್, ಐಸ್ಲ್ಯಾಂಡ್, ಜಮೈಕಾ, ನಾರ್ವೆ, ಪನಾಮ, ನಿಕರಾಗುವಾ, ರಷ್ಯಾ, ಪೋರ್ಟೊ ರಿಕೊ ಮಾರ್ಟಿನ್ , ಸ್ಪೇನ್, ಬಹಾಮಾಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ವೆನೆಜುವೆಲಾ ಸೇರಿದಂತೆ ಹೀಗೆ ವಿವಿಧ ಭಾಗಗಳಲ್ಲಿ ಕಂಡು ಬರುವುದಾದರೂ ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ,
ವರ್ಷದ ಮೊದಲ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?
ಚಂದ್ರಗ್ರಹಣದಂತೆ, ವರ್ಷದ ಮೊದಲ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ. ಏಕೆಂದರೆ ಭಾರತದಲ್ಲಿ ಆ ಸಮಯದಲ್ಲಿ ರಾತ್ರಿ, ಹಾಗಾಗಿ ಈ ಗ್ರಹಣ ನಮಗೆ ಕಾಣಿಸುವುದಿಲ್ಲ. ಚಂದ್ರಗ್ರಹಣವೂ ಕಂಡು ಬಂದಿರಲಿಲ್ಲ, ಈ ಸೂರ್ಯಗ್ರಹಣವೂ ಕಂಡು ಬರುವುದಿಲ್ಲ.
ಭಾರತಕ್ಕೆ ಈ ಗ್ರಹಣದ ಸೂತಕ ಇದೆಯೇ?
ಇದರ ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುವುದು, ನಂತರ ಗ್ರಹಣ ಮುಗಿದಾಗ ಮುಕ್ತಾಯವಾಗುವುದು. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಹಾಗಾಗಿ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ.
ಗ್ರಹಣದ ನಂಬಿಕೆ ಹಿಂದಿರುವ ವೈಜ್ಞಾನಿಕ ಸತ್ಯಗಳು
ಬರಿಗಣ್ಣಿನಲ್ಲಿ ವೀಕ್ಷಿಸಬಾರದು
ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ವೀಕ್ಷಣೆ ಮಾಡುವುದರಿಂದ ಇದು ನಿಮ್ಮ ರೆಟಿನಾವನ್ನು ಹಾನಿಗೊಳಿಸಬಹುದು ಅಥವಾ ಕಣ್ಣಿಗೆ ಹಾನಿಯುಂಟಾಗಿ ಕುರುಡತನ ಉಂಟಾಗುವುದು. ಆದ್ದರಿಂದ ಜಾಗ್ರತೆವಹಿಸಿ. ನೀವು ಸೂರ್ಯಗ್ರಹಣವನ್ನು ವೀಕ್ಷಿಸುವುದಾದರೆ ಸೂರ್ಯಗ್ರಹಣದ ಕನ್ನಡಕವನ್ನು ಬಳಸಬೇಕು. ಇದು ಮೂಢ ನಂಬಿಕೆಗಳಲ್ಲ, ವೈಜ್ಞಾನಿಕ ಸತ್ಯ, ಈ ಬಗ್ಗೆ ನೆನಪಿರಲಿ.
ಜೀರ್ಣಕ್ರಿಯೆಗೆ ತೊಂದರೆಯಾಗುವುದು
ಗ್ರಹಣದ ಸಮಯಲ್ಲಿ ಯಾವುದೇ ರೀತಿಯ ಆಹಾರ ಸೇವಿಸಬೇಡಿ ಎಂದು ಹೇಳುವುದನ್ನು ಕೇಳಿರಬಹುದು, ಇದನ್ನು ಮೂಢನಂಬಿಕೆ ಎಂದು ಹೇಳುವವರೂ ಇದ್ದಾರೆ, ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಗ್ರಹಣದ ಸಮಯದಲ್ಲಿ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಇದು ನಿಮ್ಮ ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಗ್ರಹಣ ಮುಗಿಯುವವರೆಗೆ ಏನೂ ತಿನ್ನುವುದು, ಕುಡಿಯುವುದು ಮಾಡಬೇಡಿ.
ಮನಸ್ಸಿನ ಮೇಲೂ ಪರಿಣಾಮ ಬೀರುವುದು
ಗ್ರಹಣವು ನಮ್ಮ ಮನಸ್ಥಿತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತ. ಯಾವುದೇ ಕಾರಣ ಇಲ್ಲದೆಯೂ ನಿಮ್ಮ ಮನಸ್ಥಿತಿ ಹಾಳಾಗಬಹುದು ಅಥವಾ ಕಿರಿಕಿರಿ, ದುಃಖ ಅನುಭವಿಸಬಹುದು.
ಈ ಗ್ರಹಣದ ಪ್ರಭಾವ ಭಾರತದ ಮೇಲೆ ಇರುವುದಿಲ್ಲ ಹಾಗಾಗಿ ಗ್ರಹಣದ ಸಮಯದಲ್ಲಿ ಯಾವುದೇ ನಿಯಮ ಪಾಲಿಸಬೇಕಾಗಿಲ್ಲ, ಆದರೆ ಗ್ರಹಣದ ಸೂತಕದ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಿದಿದ್ದರೆ ಒಳ್ಳೆಯದು.