ಸಿಡ್ನಿ: ಶನಿವಾರ ಸಿಡ್ನಿಯ ಮಾಲ್‌ನಲ್ಲಿ 6 ಜನರನ್ನು ಚೂರಿ ಇರಿದು ಕೊಂದ ವ್ಯಕ್ತಿ ಕೇವಲ ಮಹಿಳೆಯರು ಹಾಗೂ ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾನೆ ಎಂಬುದು ತಿಳಿದುಬಂದಿದೆ. ಈ ಘಟನೆ ಮಾಸುವ ಮುನ್ನವೇ ಸಿಡ್ನಿಯ ಚರ್ಚ್ ಒಂದರಲ್ಲಿ ಸೋಮವಾರ ವ್ಯಕ್ತಿಯೊಬ್ಬ ನಾಲ್ವರಿಗೆ ಚೂರಿಯಿಂದ ಇರಿದಿದ್ದಾನೆ.
ಚರ್ಚ್‌ನಲ್ಲಿದ್ದ ಬಿಷಪ್ (ಕ್ರೈಸ್ತ ಧರ್ಮಗುರು) ಮತ್ತು ಚರ್ಚ್‌ಗೆ ಹೋಗುತ್ತಿದ್ದವರಿಗೆ ಆರೋಪಿಯು ಚೂರಿಯಿಂದ ಇರಿದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಡ್ನಿಯ ಹೊರವಲಯದಲ್ಲಿರುವ ವಾಕ್ಲೆಯ 'ಕ್ರಿಸ್ಟ್ ದಿ ಗುಡ್ ಶೆಫರ್ಡ್ ಚರ್ಚ್'ನಲ್ಲಿ ಬಿಷಪ್ ಅವರ ಬಳಿ ಕಪ್ಪು ಬಟ್ಟೆ ಧರಿಸಿರುವ ವ್ಯಕ್ತಿಯೊಬ್ಬ ಬರುತ್ತಿರುವುದು ಹಾಗೂ ಬಿಷಪ್‌ನ ತಲೆ ಹಾಗೂ ದೇಹದ ಮೇಲ್ಭಾಗದಲ್ಲಿ ಚಾಕುದಿಂದ ಇರಿಯುತ್ತಿರುವ ದೃಶ್ಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಬಿಷಪ್ ಮೇಲೆ ದಾಳಿ ನಡೆಯುತ್ತಿದ್ದಂತೆ ಜನರೆಲ್ಲ ಕಿರುಚಾಡುತ್ತ ಬಿಷಪ್ ಸಹಾಯಕ್ಕೆ ಓಡಿ ಬಂದಿದ್ದಾರೆ. ಬಿಷಪ್ ಮತ್ತು ದಾಳಿಗೊಳಗಾದ ಇತರ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ತನಿಖೆ ನಡೆಸಲಾಗುತ್ತಿದ್ದು, ಸದ್ಯ ಘಟನೆ ನಡೆದ ಸ್ಥಳದಲ್ಲಿ ಸಂಚರಿಸದಂತೆ ಪೊಲೀಸರು ಜನರಿಗೆ ಸೂಚಿಸಿದ್ದಾರೆ.
ಶನಿವಾರ ಮಾಲ್‌ನಲ್ಲಿ 9 ತಿಂಗಳ ಹೆಣ್ಣುಮಗು, ಅದರ ತಾಯಿ ಸೇರಿದಂತೆ ಒಟ್ಟು 6 ಮಂದಿಯನ್ನು ವ್ಯಕ್ತಿ ಹತ್ಯೆಗೈದಿದ್ದಾನೆ. ಈತ ಒಟ್ಟು 20 ಜನರಿಗೆ ಇರಿದಿದ್ದಾನೆ.
'ದಾಳಿಕೋರ ಸ್ಥಳದಲ್ಲಿದ್ದ ಪುರುಷರನ್ನು ನಿರ್ಲಕ್ಷಿಸಿ ಕೇವಲ ಮಹಿಳೆಯರು ಮತ್ತು ಮಕ್ಕಳನ್ನೇ ಗುರಿಯಾಗಿ ದಾಳಿ ನಡೆಸಿದ. ಅವನು ತುಂಬಾ ಕೋಪದಲ್ಲಿದ್ದ. ಚೂರಿಯನ್ನು ಹಿಡಿದುಕೊಂಡಿದ್ದ ರೀತಿಯೇ ಭಯಾನಕವಾಗಿತ್ತು' ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಾಳಿಕೋರನನ್ನು ಜೋಯಲ್ ಕೌಚಿ (40) ಎಂದು ಗುರುತಿಸಲಾಗಿದ್ದು, ಈತ ಕ್ವೀನ್ಸ್‌ಲ್ಯಾಂಡ್‌ನಿಂದ ಇತ್ತೀಚೆಗೆ ಸಿಡ್ನಿಗೆ ಆಗಮಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಈತ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ.
ದಾಳಿಕೋರನ ಕುಟುಂಬವು ಆತನೊಂದಿಗೆ ನಿರಂತರ ಸಂಪರ್ಕದಲ್ಲಿಲ್ಲ. ಆರೋಪಿ ಈ ಹಿಂದೆ ಯಾವುದೇ ಪ್ರಕರಣದಲ್ಲಿ ಬಂಧಿತನಾಗಿಲ್ಲ ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಚೀನಾ ಮಹಿಳೆ ಬಲಿ: ಶನಿವಾರ ಮಾಲ್‌ನಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ 6 ಜನರ ಪೈಕಿ ಚೀನಾದ ಯಿಕ್ಸುಯಾಂಗ್ ಚೆಂಗ್ ಎಂಬ ಮಹಿಳೆ ಸೇರಿದ್ದಾರೆ. ಈಕೆ ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಸಂದರ್ಶನದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ತಿಳಿಸಿದ್ದಾರೆ.