ಕಾಸರಗೋಡು: ಕೇರಳದ ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗಾಗಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿರುವ ಕಲ್ಯಾಣ ಯೋಜನೆಗಳನ್ನು ಜನತೆಗೆ ತಲುಪಿಸಲು ಕಾಸರಗೋಡಿನ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಎನ್.ಡಿ. ಎ. ಅಭ್ಯರ್ಥಿ ಗೆಲುವು ಅನಿವಾರ್ಯ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ, ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಕೀಲರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕೇರಳದಿಂದ ರೈಲಿನ ಎರಡು ಬೋಗಿಗಳಲ್ಲಿ ಪ್ರಯಾಣಿಸುವ ಎಡ ಮತ್ತು ಬಲ ರಂಗಗಳ ಸಂಸದರು ದೆಹಲಿ ತಲುಪಿದಾಗ ಕೇರಳದ ಜನತೆಗೆ ವಂಚಿಸುವ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಕೇರಳ ನಾಲ್ಕೂವರೆ ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದರೂ, ಕೇಂದ್ರದ ನರೇಂದ್ರ ಮೊದಿ ಸರ್ಕಾರದ ಕೃಪೆಯಿಂದ ಇಂದು ಪಿಣರಾಯಿ ವಿಜಯನ್ ಆಡಳಿತದಲ್ಲಿ ಮುಂದುವರಿಯುತ್ತಿದೆ. ಕೇರಳ ಯಾವ ಅಭಿವೃದ್ಧಿಯನ್ನು ಜಾರಿಗೆ ತಂದಿದೆ ಎಂಬುದಕ್ಕೆ ಸ್ಪಷ್ಟ ಪ್ರಣಾಳಿಕೆಯನ್ನು ಮುಂದಿಡಲು ಸಾಧ್ಯವಾಗದಿರುವ ಪಿಣರಾಯಿ ವಿಜಯನ್ ಸರ್ಕಾರ, ನೌಕರರಿಗೆ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಎನ್‍ಡಿಎ ಅಧಿಕಾರಕ್ಕೇರಲಿರುವುದು ಖಚಿತ ಎಂದು ಕುಮ್ಮನಂ ರಾಜಶೇಖರನ್ ತಿಳಿಸಿದರು.
ವಕೀಲರಾದ ಎಸಿ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿ.ರವೀಂದ್ರನ್, ಪಿ. ಮನೋಜ್ ಉಪಸ್ಥಿತರಿದ್ದರು. ಕರುಣಾಕರನ್ ನಂಬಿಯಾರ್ ಸ್ವಾಗತಿಸಿದರು. ಅನಿಲ್ ವಂದಿಸಿದರು.