ಕಾಸರಗೋಡು: ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಕೇರಳ ಪ್ರವಾಸ ಪೂರೈಸಿ ಸೋಮವಾರ ಬೆಳ್ತಂಗಡಿಗೆ ತೆರಳಿದರು. ಮಂಜೇಶ್ವರ ತಾಲೂಕಿನ ಬಾಯಾರು ಆಟಿಕುಕ್ಕೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶ, ಶಿಖರ ಪ್ರತಿಷ್ಠೆ, ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಚಿತ್ತೈಸಿ, ಏ. 28ರಂದು ಸಂಜೆ ಎಡನೀರು ಮಠಕ್ಕೆ ಆಗಮಿಸಿ ಮೊಕ್ಕಾಂ ಹೂಡಿದ್ದರು.
ಸೋಮವಾರ ಬೆಳಗ್ಗೆ ಶ್ರೀ ಎಡನೀರು ಮಠದಲ್ಲಿ ಪಾದಪೂಜೆ, ಗುರುವಂದನೆ ಸ್ವೀಕರಿಸಿದ ನಂತರ ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಿ ಹರಸಿದರು. ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಉಪಸ್ಥಿತರಿದ್ದರು. ನಂತರ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತೆರಳಿದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಭಕ್ತಾದಿಗಳಿಗೆ ಆಶೀರ್ವಚನ ನೀಡಿ, ಮಂತ್ರಾಕ್ಷತೆಯನ್ನಿತ್ತು, ಬೆಳ್ತಂಗಡಿಗೆ ಪ್ರಯಾಣ ಬೆಳೆಸಿದರು.