ಇಡುಕ್ಕಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ವರ್ಷವೊಂದರಲ್ಲೇ ಕಾಡಾನೆ ದಾಳಿಗೆ ಮೂವರು ಮಹಿಳೆಯರು ಸೇರಿದಂತೆ 9 ಮಂದಿ ಬಲಿಯಾಗಿದ್ದಾರೆ.
ಇಡುಕ್ಕಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ವಾರದೊಳಗೆ ಕಾಡಾನೆ ದಾಳಿಗೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ವಯನಾಡಿನಲ್ಲಿ ಮೂರು ಮತ್ತು ಪತ್ತನಂತಿಟ್ಟದಲ್ಲಿ ಇಬ್ಬರು ಮೃತರಾಗಿದ್ದಾರೆ. ಹುಲಿ, ಕಾಡು ಎಮ್ಮೆ, ಕಾಡುಹಂದಿ ಮುಂತಾದ ಪ್ರಾಣಿಗಳ ದಾಳಿಯಿಂದ ಗಾಯಗೊಂಡವರೂ ಇದ್ದಾರೆ. ಮರಯೂರು ಒಂದರಲ್ಲೇ ಕಾಡಾನೆ ದಾಳಿಗೆ ಹಲವರು ಗಾಯಗೊಂಡಿದ್ದಾರೆ. ಮೊನ್ನೆ ಕುಮಳಿಯಲ್ಲಿಯೂ ಕಾಡಾನೆ ದಾಳಿ ನಡೆದಿತ್ತು.
ಇಡುಕ್ಕಿ:
ಜನವರಿ 8 ರಂದು ಚಿನ್ನಕನಾಲ್ ಬಳಿ ಕಾಡಾನೆ ದಾಳಿಗೆ ಪನ್ನಿಯಾರ್ ಎಸ್ಟೇಟ್‍ನ ಪರಿಮಳಮ್ ಸಾವನ್ನಪ್ಪಿದ್ದರು.
ಜನವರಿ 22 ರಂದು ಚಿನ್ನಕನಾಲ್‍ನ ಬಿ.ಎಲ್.ರಾಮ್ ಎಂಬಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ವೆಳ್ಳಕಲ್ಲಿಲ್ ಸೌಂದರರಾಜ್ (68) ತೇಣಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದರು. ಜನವರಿ 24ರಂದು ಕೊಯಮತ್ತೂರು ನಿವಾಸಿ ಕೆ. ಪಾಲ್ರಾಜ್ (74)ದಾಳಿಗೆ ಮೃತರಾದರು. ಫೆ.26ರ ರಾತ್ರಿ ಕನ್ನಿಮಲಯ ಎಸ್ಟೇಟ್‍ನ ಆಟೋರಿಕ್ಷಾ ಚಾಲಕ ಸುರೇಶ್‍ಕುಮಾರ್ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿತ್ತು. ರಾಮಕೃಷ್ಣನ್ ಅವರ ಪತ್ನಿ ಇಂದಿರಾ ರಾಮಕೃಷ್ಣನ್ (71) ಮಾರ್ಚ್ 4 ರಂದು ಆದಿಮಲಿ ಬಳಿಯ ಕಂಜಿರವೇಲಿಯಲ್ಲಿ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದರು.
ವಯನಾಡ್:
ಜನವರಿ 30 ರಂದು ವಯನಾಡ್ ತೊಲ್ಪೆಟ್ಟಿಯಲ್ಲಿ ಲಕ್ಷ್ಮಣನ್ (55) ದಾಳಿಯಿಂದ ಮೃತರಾಗಿದ್ದರು. ಫೆ.10ರಂದು ಪಣಚಿಯಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಕಾಡಾನೆ ತುಳಿದು ಅಜೀಶ್ (47) ಮೃತಪಟ್ಟಿದ್ದರು. ಈ ವಿಚಾರ ಇತ್ತೀಚಿನ ದಿನಗಳಲ್ಲಿ ರಾಜ್ಯ ಕಂಡ ದೊಡ್ಡ ಪ್ರತಿಭಟನೆಗೂ ಕಾರಣವಾಗಿತ್ತು.
ಮಾರ್ಚ್ 28 ರಂದು ವಯನಾಡಿನ ಮೇಪಾಡಿಯಲ್ಲಿ ಪರಪನಪರ ಕಾಲೋನಿಯ ಸುರೇಶ್ ಎಂಬವರ ಪತ್ನಿ ಮಿನಿ ಎಂಬವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದರು.
ಪತ್ತನಂತಿಟ್ಟ:
ಮಾರ್ಚ್ 19 ರಂದು ಕಲ್ಲರಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿದ್ದ ಗುಂಪಿನಲ್ಲಿ ಎಜ್ಜಂತಾಳ ಮೂಲದ ದಿಲೀಪ್ (52) ಆನೆದಾಳಿಗೆ ಮೃತಪಟ್ಟಿದ್ದರು. ಏಪ್ರಿಲ್ 1 ರಂದು ಮಲೈಕುಟಿಲ್‍ನಲ್ಲಿ ಬಿಜು (52) ಆನೆ ದಾಳಿಗೊಳಗಾಗಿ ಮೃತರಾದರು.
ಪರಿಹಾರ ಮರೀಚಿಕೆ?: ಕಾಡು ಪ್ರಾಣಿಗಳು ನಾಡಿನೊಳಗೆ ಬರದಂತೆ ಹಲವೆಡೆ ವಿದ್ಯುತ್ ಬೇಲಿ ಅಳವಡಿಸಲಾಗಿದೆ. ಬಹುತೇಕ ಕಡೆ ರಾಪಿಡ್ ರೆಸ್ಪಾನ್ಸ್ ತಂಡ ಹಗಲು ರಾತ್ರಿ ತಪಾಸಣೆ ನಡೆಸುತ್ತಿದೆ. ಈ ಮೂಲಕ ಆನೆಗಳು ನಿಯಮಿತವಾಗಿ ಜನವಾಸದೆಡೆ ತಲುಪುತ್ತವೆ. ಕಾಡಿನೊಳಗೆ ವನ್ಯಪ್ರಾಣಿಗಳಿಗೆ ನೀರು ಮತ್ತು ಆಹಾರ ಒದಗಿಸುವುದು, ಕಾಡಿನೊಳಗೆ ಹೊರಗಿನವರ ಚಲನವಲನವನ್ನು ತಡೆಗಟ್ಟುವುದು, ಪ್ರಾಣಿಗಳ ಆವಾಸಸ್ಥಾನಗಳ ನಾಶವನ್ನು ನಿಯಂತ್ರಿಸುವುದು ಇತ್ಯಾದಿಗಳು ವನ್ಯಜೀವಿಗಳ ದಾಳಿಯನ್ನು ತಡೆಯುವ ಮಾರ್ಗಗಳಾಗಿವೆ.