ನವದೆಹಲಿ: ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಭಗವಾನ್ ರಾಮನ ಚಿತ್ರ ಇರುವ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ದೆಹಲಿ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಅಂಗಡಿಯ ಮಾಲೀಕ ಕಾರ್ಖಾನೆಯಿಂದ 1000 ಪ್ಲೇಟ್‌ಗಳನ್ನು ಖರೀದಿಸಿದ್ದಾರೆ ಮತ್ತು ಅವುಗಳಲ್ಲಿ ನಾಲ್ಕು ಪ್ಲೇಟ್ ಗಳಲ್ಲಿ ಮಾತ್ರ ಭಗವಾನ್ ರಾಮನ ಚಿತ್ರ ಮುದ್ರಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಪ್ಲೇಟ್ ಗಳ ಮೇಲಿನ ಭಗವಾನ್ ರಾಮನ ಚಿತ್ರದ ಬಗ್ಗೆ ತನಗೆ ಗೊತ್ತಿಲ್ಲ ಎಂದು ಮಾಲೀಕ ಹೇಳಿದ್ದಾರೆ. ಆ ಬಗ್ಗೆ ಕಾರ್ಖಾನೆಯ ಮಾಲೀಕರು ಪರಿಶೀಲಿಸಿದ್ದಾರೆ" ಎಂದು ಅಧಿಕಾರಿ ಹೇಳಿದರು.
ಶನಿವಾರ ಮಧ್ಯಾಹ್ನ ಭಗವಾನ್ ರಾಮನ ಚಿತ್ರವಿರುವ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿರುವ ಬಗ್ಗೆ ದೆಹಲಿ ಪೊಲೀಸರಿಗೆ ಜಹಾಂಗೀರ್‌ಪುರಿಯಿಂದ ಕರೆ ಮಾಡಿ ಮಾಹಿತಿ ನೀಡಲಾಗಿದೆ.
"ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿದಾಗ, ಅಲ್ಲಿ ಕೆಲವು ವ್ಯಕ್ತಿಗಳು ಅಂಗಡಿಯ ಹೊರಗೆ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿತು. ಈ ವಿಷಯದ ಬಗ್ಗೆ ಸೂಕ್ತ ತನಿಖೆಯ ಭರವಸೆ ನೀಡಿದ ನಂತರ ಅವರು ಪ್ರತಿಭಟನೆ ಕೈಬಿಟ್ಟರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಗಡಿಯ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 107/151 ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ನಂತರ ಅವರನ್ನು ಬಿಟ್ಟು ಕಳುಹಿಸಲಾಗಿದೆ. ಪ್ಲೇಟ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.