ಪುಣೆ: ಹಾಳು ಬಾವಿಗೆ ಬಿದ್ದಿದ್ದ ಬೆಕ್ಕೊಂದರ ಪ್ರಾಣ ಕಾಪಾಡಲು ಹೋಗಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ನೇವಸಾ ತಾಲ್ಲೂಕಿನ ವಾಕಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಪುಣೆ: ಹಾಳು ಬಾವಿಗೆ ಬಿದ್ದಿದ್ದ ಬೆಕ್ಕೊಂದರ ಪ್ರಾಣ ಕಾಪಾಡಲು ಹೋಗಿ ಐವರು ದಾರುಣವಾಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ನೇವಸಾ ತಾಲ್ಲೂಕಿನ ವಾಕಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಾಣಿಕ್ ಕಾಳೆ (65), ಸಂದೀಪ್ ಕಾಳೆ (36), ಅನಿಲ್ ಕಾಳೆ (53), ಬಾಬುಲ್ ಕಾಳೆ (28), ಬಾಬಾಸಾಹೇಬ್ (36) ಎಂದು ಗುರುತಿಸಲಾಗಿದೆ.
ವಾಕಡಿ ಗ್ರಾಮದ ಕಾಳೆ ಎನ್ನುವವರ ಕುಟುಂಬದ ಹಿತ್ತಲಿನಲ್ಲಿದ್ದ ಬಾವಿಯೊಂದು ಹಾಳು ಬಿದ್ದಿತ್ತು. ಅದನ್ನು ಇತ್ತೀಚೆಗೆ ಬಯೋಗ್ಯಾಸ್ ಗುಂಡಿಯಾಗಿ ಪರಿವರ್ತಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ ಆ ಗುಂಡಿಯಲ್ಲಿ ಬೆಕ್ಕೊಂದು ಬಿದ್ದು ಸಾವು ಬದುಕಿನ ಮಧ್ಯ ಹೋರಾಡುತ್ತಿತ್ತು. ಬೆಕ್ಕನ್ನು ನೋಡಿದ್ದ ಯುವಕ ಬಾಬುಲ್ ಕಾಳೆ ನೇರವಾಗಿ ಗುಂಡಿಗೆ ಜಿಗಿದು ಅದರ ಪ್ರಾಣ ಉಳಿಸಲು ನೋಡಿದ್ದಾನೆ. ಆದರೆ, ಆತ ಹೊರಬರಲಾರದ್ದನ್ನು ನೋಡಿದ ಇತರ ಆರು ಜನ ಗುಂಡಿಗಿಳಿದು ಬಾಬುಲ್‌ನ ಪ್ರಾಣ ಕಾಪಾಡಲು ಮುಂದಾಗಿದ್ದಾರೆ.
ಆದರೆ, ಬಯೋಗ್ಯಾಸ್ ಗುಂಡಿಯಲ್ಲಿನ ವಿಷಾನಿಲದಿಂದ (ಮಿಥೇನ್) ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಒಬ್ಬ ಮಾತ್ರ ಬದುಕಿದ್ದಾನೆ.
'ಗುಂಡಿಯಿಂದ ಬೆಕ್ಕು ಹಾಗೂ ಐವರ ಮೃತದೇಹಗಳನ್ನು ಮಂಗಳವಾರ ರಾತ್ರಿ ಹೊರತೆಗೆಯಲಾಗಿದೆ. ಬದುಕುಳಿದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ನೇವಸಾ ತಹಶಿಲ್ದಾರ್ ತಿಳಿಸಿದ್ದಾರೆ.