ನವದೆಹಲಿ: ಲೋಕಸಭೆಗೆ ಶುಕ್ರವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ 14 ಸೇರಿ ವಿವಿಧ ರಾಜ್ಯಗಳ 88 ಕ್ಷೇತ್ರಗಳಲ್ಲಿ ನಡೆದ ಮತದಾನದ ವೇಳೆ ಪ್ರಜಾಪ್ರಭುತ್ವವನ್ನು ಸಂಭ್ರಮಿಸುವ ವಿವಿಧ ಚಿತ್ರಣಗಳು ಅನಾವರಣಗೊಂಡವು.
ಕುಟುಂಬ ಮೂರು ತಲೆಮಾರುಗಳ ಮತದಾರು ಒಂದೇ ಸಾಲಿನಲ್ಲಿ ನಿಂತ ಮತ ಹಕ್ಕು ಚಲಾಯಿಸಿದರು.
ಮತ ಹಕ್ಕು ಚಲಾಯಿಸಿದ ವಿವಿಧ ಸಂಭ್ರಮದ ಚಿತ್ರಣಗಳು ಇಲ್ಲಿವೆ.
* ಛತ್ತೀಸಗಢದ ಕಾಂಕೇರ್ ಕ್ಷೇತ್ರ ವ್ಯಾಪ್ತಿ ಸಿವ್ನಿ ಗ್ರಾಮದಲ್ಲಿ ಮತಗಟ್ಟೆಯನ್ನು ವಿವಾಹ ಮಂಟಪದಂತೆ ಸಾಂಪ್ರದಾಯಿಕ ಶೈಲಿಯಲ್ಲಿ ಅಲಂಕರಿಸಲಾಗಿತ್ತು. ಹಲವು ವಧು-ವರರು ಸಾಂಪ್ರದಾಯಿಕ ಉಡುಗೆಯಲ್ಲಿಯೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.
* ಉತ್ತರ ಪ್ರದೇಶದ ಬುಳಂದಶಹರ್‌ನಲ್ಲಿ ಮಹಿಳಾ ಮತದಾರರದು ಮತ್ತೊಂದು ರೀತಿ ಸಂಭ್ರಮ. ಡೋಲು (ಧೋಳಕ್) ಬಾರಿಸುತ್ತಾ, ಹಾಡು ಹೇಳುತ್ತಾ ಅವರು ಎತ್ತಿನಗಾಡಿಗಳಲ್ಲಿ ಮತಗಟ್ಟೆಗೆ ಬಂದರು.
* ರಾಜಸ್ಥಾನದ ಕೋಟಾ-ಬುಂದಿ ಕ್ಷೇತ್ರದ ಗುಂಜಾರಾ ಮತಗಟ್ಟೆಯಲ್ಲಿ 108 ವರ್ಷ ವಯಸ್ಸಿನ ಭುರಿ ಭಾಯಿ ಹಕ್ಕು ಚಲಾಯಿಸಿದರು. ಅವರನ್ನು ಕುಟುಂಬ ಸದಸ್ಯರು ವ್ಹೀಲ್ ಚೇರ್‌ನಲ್ಲಿ ಮತಗಟ್ಟೆ ಕರೆತಂದರು. ಅಂತೆಯೇ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಮತಗಟ್ಟೆಯಲ್ಲಿ 102 ವರ್ಷ ವಯಸ್ಸಿನ ಕರಂದಿನ್ ಮತ ಚಲಾಯಿಸಿದರು.
* ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಸನ್ಕಂದ್ ಮತಗಟ್ಟೆಯಲ್ಲಿ ಮೂರು ತಲೆಮಾರಿನವರಿಗೆ ಒಟ್ಟಿಗೆ ಮತ ಚಲಾಯಿಸುವ ಸಡಗರ. ವ್ಯಕ್ತಿ, ಅವರ ಪುತ್ರ, ಇಬ್ಬರು ಮೊಮ್ಮಗಳ ಜೊತೆಗೆ ಬಂದು ಮತ ಚಲಾಯಿಸಿ, ಸಂಭ್ರಮಕ್ಕೆ ಸಾಕ್ಷಿಯಾಗಿ ಸೆಲ್ಫಿ ತೆಗೆದುಕೊಂಡರು.
* ಆಂಧ್ರಪ್ರದೇಶದ ಅಮರಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ನವನೀತ ರಾಣಾ ಅವರು ತಮ್ಮ ಪತಿ, ಶಾಸಕ ರವಿ ರಾಣಾ ಅವರೊಂದಿಗೆ ಮತ ಚಲಾಯಿಸಲು ಮೋಟರ್‌ಬೈಕ್‌ನಲ್ಲಿ ಬಂದರು.
ಕೇರಳದ ಕೋಯಿಕ್ಕೋಡ್‌ನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತಿದ್ದ ಮಾನಿನಿಯರು -ಪಿಟಿಐ ಚಿತ್ರಅಸ್ಸಾಂನ ದರ‍್ರಾಂಗ್ ಜಿಲ್ಲೆಯ ಗಶ್‌ಬರಿ ಗ್ರಾಮದ ನಿವಾಸಿಗಳು ಮತ ಚಲಾಯಿಸಲು ಸಮೀಪದ ಮತಗಟ್ಟೆಗೆ ದೋಣಿಯಲ್ಲಿ ತೆರಳಿದರು