ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ(ಯುಎಇ) ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಯುಎಇಗೆ ಪ್ರಯಾಣಿಸುವ ಮತ್ತು ಆ ಮೂಲಕ ಹಾದುಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ವಿಮಾನಗಳ ಹಾರಾಟ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಅನಿವಾರ್ಯವಲ್ಲದ ಪ್ರಯಾಣವನ್ನು ಮುಂದೂಡುವಂತೆ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.
ದುಬೈನ ಭಾರತೀಯ ಕಾನ್ಸುಲೇಟ್, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಈಗಾಗಲೇ ಸಹಾಯವಾಣಿಯನ್ನೂ ಆರಂಭಿಸಿದ್ದಾರೆ.
ಅನಿಶ್ಚಿತತೆಯ ವಾತಾವರಣದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟಕ್ಕೆ ತೊಡಕಾಗಿದ್ದು, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ ಎಂದೂ ರಾಯಭಾರ ಕಚೇರಿ ತಿಳಿಸಿದೆ.
ಸದ್ಯದ ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಅಧಿಕಾರಿಗಳು 24 ಗಂಟೆ ಶ್ರಮಿಸುತ್ತಿದ್ದಾರೆ.
'ಆಯಾ ವಿಮಾನಗಳ ನಿರ್ಗಮನ ದಿನಾಂಕ ಮತ್ತು ಸಮಯದ ಬಗ್ಗೆ ವಿಮಾನಯಾನ ಸಂಸ್ಥೆಗಳಿಂದ ಅಂತಿಮ ದೃಢೀಕರಣದ ನಂತರವೇ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬಹುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅಥವಾ ಆ ಮಾರ್ಗದಲ್ಲಿ ಹಾದು ಹೋಗುವ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯ ಪ್ರಯಾಣಿಕರು ವಿಮಾನಗಳ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಬರುವವರೆಗೂ ಅನಿವಾರ್ಯವಲ್ಲದ ಪ್ರಯಾಣವನ್ನು ಮರುಹೊಂದಿಸಲು ಸೂಚಿಸಲಾಗಿದೆ' ರಾಯಭಾರ ಕಚೇರಿ ತಿಳಿಸಿದೆ.