ವಾರಾಣಸಿ :ಉತ್ತರಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಪೊಲೀಸರಿಗೆ ಅರ್ಚಕರ ವೇಷ ತೊಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತ ಫೋಟೊ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಗರ್ಭಗುಡಿಯ ಹೊರಗಡೆ ನಿಯೋಜನೆಗೊಂಡಿರುವ ಮಹಿಳಾ ಮತ್ತು ಪುರುಷ ಪೊಲೀಸರು ಅರ್ಚಕರಂತೆ ವೇಷ ತೊಟ್ಟು ದೇವಸ್ಥಾನದ ಭದ್ರತೆ ನೋಡಿಕೊಳ್ಳುತ್ತಿದ್ದಾರೆ.
ಸುದ್ದಿ ತುಣಕನ್ನು ಹಂಚಿಕೊಂಡು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, 'ಯಾವ ಪೊಲೀಸ್ ಕೈಪಿಡಿ ಪ್ರಕಾರ ಈ ಪೊಲೀಸರು ಅರ್ಚಕರ ವೇಷ ಧರಿಸಿದ್ದಾರೆ? ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರ ಪ್ರದೇಶ ಆಡಳಿತ ಏನು ಉತ್ತರ ನೀಡುತ್ತದೆ? ಎಂದು ಕೇಳಿರುವ ಅವರು, ಈ ಬಗ್ಗೆ ಆದೇಶ ನೀಡಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಾರಾಣಸಿ ಪೊಲೀಸ್ ಆಯುಕ್ತ ಮೋಹಿತ್ ಅಗರವಾಲ್ ಅವರು, 'ದೇವಸ್ಥಾನದಲ್ಲಿ ಕೆಲ ಭಕ್ತರ ಜೊತೆ ಪೊಲೀಸರು ಕಠಿಣವಾಗಿ ವರ್ತಿಸುತ್ತಾರೆ ಎನ್ನುವ ದೂರುಗಳು ಮತ್ತು ನಮ್ಮ ಕೆಲ ಭಕ್ತರು ಪೊಲೀಸರನ್ನೂ ತಳ್ಳಾಟ, ನೂಕಾಟ ಮಾಡುತ್ತಾರೆ ಎನ್ನುವ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅರ್ಚಕರ ವೇಷ ಧರಿಸಿದರೆ ಒಂದು ಸಕಾರಾತ್ಮಕ ವಾತಾವರಣದ ಜೊತೆ ಭಕ್ತರೂ ಪೊಲೀಸರ ಮಾತು ಕೇಳುತ್ತಾರೆ ಎನ್ನುವ ದೃಷ್ಟಿಯಿಂದ ಈ ರೀತಿ ಆದೇಶ ನೀಡಲಾಗಿದೆ. ಅಲ್ಲದೇ ಪೊಲೀಸರನ್ನು ತಳ್ಳುವುದಿಲ್ಲ' ಎಂದು ಹೇಳಿದ್ದಾರೆ.
'ಅರ್ಚಕರ ವೇಷದಲ್ಲಿನ ಪೊಲೀಸರು ಗರ್ಭಗುಡಿಯ ಮುಂದೆ ನಿಂತು ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳನ್ನು ಮಾತ್ರ ನಿಯಂತ್ರಿಸುತ್ತಾರೆ. ದೇವಸ್ಥಾನದ ಹೊರಾಂಗಣ ಹಾಗೂ ಇತರ ಕಡೆ ನಮ್ಮ ಪೊಲೀಸರು ಸಾಮಾನ್ಯ ಪೊಲೀಸ್ ಸಮವಸ್ತ್ರದಲ್ಲೇ ಕಾರ್ಯನಿರ್ವಹಿಸಲಿದ್ದಾರೆ' ಎಂದು ತಿಳಿಸಿದ್ದಾರೆ.