ಕೋಯಿಕ್ಕೋಡ್: ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ, ಧರ್ಮ ಅಥವಾ ಭಾಷೆ ಆಧಾರದ ಮೇಲೆ ಕಾಂಗ್ರೆಸ್ ಪೌರತ್ವವನ್ನು ನಿರ್ಧರಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂಡಿಯಾ ಪರಿಕಲ್ಪನೆಯ ಅಡಿಯಲ್ಲಿ ಪೌರತ್ವ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಸಂವಿಧಾನ ಮತ್ತು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡುವುದು ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಕೆಲಸವಾಗಿದೆ ಎಂದು ಅವರು ಹೇಳಿದರು.
ಕೋಯಿಕ್ಕೋಡ್‌ನಲ್ಲಿ ಯುಡಿಎಫ್‌ನ ಬೃಹತ್ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಧರ್ಮ, ಸಂಸ್ಕೃತಿ, ಭಾಷೆ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ಭಾರತೀಯನ ಹಕ್ಕನ್ನು ಸಂವಿಧಾನ ರಕ್ಷಿಸುತ್ತದೆ ೆಂದು ಹೇಳಿದರು.
ದೇಶದ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅರ್ಥ ಮಾಡಿಕೊಂಡಿಲ್ಲ ಎಂಬುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ನಮ್ಮ ಬಹು ಭಾಷೆ, ಸಂಪ್ರದಾಯ ಮತ್ತು ಧರ್ಮಗಳು ನಮ್ಮ ಶಕ್ತಿ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಟೀಕಿಸಿದರು.
ಈ ಬಹುವಿಧದ ದೃಷ್ಟಿಕೋನಗಳು ಅತ್ಯಂತ ಸುಂದರವಾದ ದೃಷ್ಟಿಕೋನಗಳಿಂದ ಬಂದಿರುವುದನ್ನು ಅವರು ಕಾಣಲಾರರು. ಏಕೆಂದರೆ, ಅವರ ಏಕೈಕ ಗುರಿ ಅಧಿಕಾರದಲ್ಲಿ ಮುಂದುವರಿಯುವುದು ಮಾತ್ರ ಎಂದು ರಾಹುಲ್ ಆರೋಪಿಸಿದರು.
ರಾಜಕೀಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್ ಜಾರಿಗೆ ತರಲಾಗಿದೆ ಎಂದು ಮೋದಿ ಹೇಳುತ್ತಾರೆ. ಆದರೆ, ಅದನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ರಾಹುಲ್ ಗಾಂಧಿ ಹೇಳಿದರು.