ತಿರುವನಂತಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಲು ಬಳಸಿದ್ದ ಹಳೆಯ ಹೆಸರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ಉಲ್ಲೇಖಿಸಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಿರುವನಂತಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಲು ಬಳಸಿದ್ದ ಹಳೆಯ ಹೆಸರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ಉಲ್ಲೇಖಿಸಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಪಿಎಂನ ಹಿರಿಯ ಮುಖಂಡ ವಿ.ಎಸ್.ಅಚ್ಯುತಾನಂದನ್ ಅವರು ದಶಕಗಳ ಹಿಂದೆ 'ಅಮೂಲ್ ಬೇಬಿ' ಎಂದು ರಾಹುಲ್ ಅವರನ್ನು ಕರೆದಿದ್ದನ್ನು ಪಿಣರಾಯಿ ಅವರು ಉಲ್ಲೇಖಿಸಿದ್ದಾರೆ.
ಪಿಣರಾಯಿ ವಿಜಯನ್ ಅವರನ್ನು ಕೇಂದ್ರದ ಬಿಜೆಪಿ ಸರ್ಕಾರವು ಯಾಕೆ ಜೈಲಿಗೆ ಕಳುಹಿಸಿಲ್ಲ ಎಂದು ರಾಹುಲ್ ಗಾಂಧಿ ಅವರು ಚುನಾವಣಾ ರ‍್ಯಾಲಿಯಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿ ವಿಜಯನ್ ಅವರು ಈ ಹೇಳಿಕೆ ನೀಡಿದ್ದರು. ರಾಹುಲ್ ಅವರು ತಮ್ಮ ವರ್ಚಸ್ಸನ್ನು ಸುಧಾರಿಸಿಕೊಂಡಿಲ್ಲ ಎಂದೂ ಹೇಳಿದ್ದರು.
ರಾಹುಲ್ ಕುರಿತು ವಿಜಯನ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ, 'ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ವಿಜಯನ್ ಅವರು ತೀರಾ ಕೆಳಮಟ್ಟಕ್ಕೆ ಇಳಿದಿದ್ದಾರೆ' ಎಂದು ಆರೋಪಿಸಿದರು.