ನವದೆಹಲಿ: ಸೇನಾ ಯೋಧರು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಇರಿಸಿದ ಹೆಜ್ಜೆಗಳು, ವಿಮಾನವು ರಾತ್ರಿಯ ಹೊತ್ತಿನಲ್ಲಿಯೂ ಬಂದಿಳಿದಿದ್ದು, ದೆಹಲಿಯಲ್ಲಿನ ವೈದ್ಯರು ನಡೆಸಿದ ಒಂಬತ್ತು ತಾಸು ಅವಧಿಯ ಶಸ್ತ್ರಚಿಕಿತ್ಸೆ...
ಯೋಧರೊಬ್ಬರ ತುಂಡಾಗಿದ್ದ ಎಡಗೈ ಹಸ್ತವನ್ನು ಮೊದಲಿನಂತೆ ಜೋಡಿಸಲು ಇವೆಲ್ಲವುಗಳ ಪರಿಣಾಮವಾಗಿ ಸಾಧ್ಯವಾಗಿದೆ.
ಲೇಹ್‌ನ ಆಸ್ಪತ್ರೆಯಲ್ಲಿ ಇವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಯಿತು. ಆದರೆ ಈ ಯೋಧನ ಹಸ್ತವನ್ನು ಜೋಡಿಸಲು ವಿಶೇಷವಾದ ಶಸ್ತ್ರಚಿಕಿತ್ಸೆಯ ಅಗತ್ಯ ಇದೆ ಎಂಬುದನ್ನು ವೈದ್ಯರು ಅರಿತರು. ಆ ಶಸ್ತ್ರಚಿಕಿತ್ಸೆ ನಡೆಸುವ ಕೌಶಲ ಇರುವ ವೈದ್ಯರು ಹಾಗೂ ಇತರ ಸಿಬ್ಬಂದಿ ಲೇಹ್‌ನಲ್ಲಿ ಲಭ್ಯರಿರಲಿಲ್ಲ.
ಗೈಲ್ಸಿನ್ ಅವರನ್ನು ಸೇನೆಯ ದೆಹಲಿಯ ಆಸ್ಪತ್ರೆಗೆ ರವಾನಿಸಲು ತೀರ್ಮಾನಿಸಲಾಯಿತು. ತುಂಡಾಗಿದ್ದ ಅಂಗವನ್ನು ಶೀತಲೀಕೃತ ಪೆಟ್ಟಿಗೆಯಲ್ಲಿ ಇರಿಸಲಾಯಿತು. ಆರರಿಂದ ಎಂಟು ತಾಸುಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಭಾರತೀಯ ವಾಯುಪಡೆಯು ತನ್ನ ಸಿ-130ಜೆ ವಿಮಾನವನ್ನು ಲೇಹ್‌ಗೆ ರವಾನಿಸಿತು.
ರಾತ್ರಿಯ ವೇಳೆ ಲ್ಯಾಂಡಿಂಗ್‌ಗೆ ಬಳಸುವ ಸಾಧನಗಳ ನೆರವಿನಿಂದ ಲೇಹ್‌ನಲ್ಲಿ ಇಳಿದ ವಿಮಾನವು, ಯೋಧನನ್ನು ಕರೆದುಕೊಂಡು ದೆಹಲಿಗೆ ತೆರಳಿತು. 'ಭೂಸೇನೆಯಿಂದ ಮನವಿ ಬಂದ ಒಂದೇ ತಾಸಿನಲ್ಲಿ ಯೋಧನನ್ನು ಕರೆದುಕೊಂಡು ಬರಲು ವಾಯುಪಡೆಯು ಅಗತ್ಯ ವ್ಯವಸ್ಥೆ ಕಲ್ಪಿಸಿತು' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದೆಹಲಿಗೆ ಕರೆತಂದ ನಂತರ ಗೈಲ್ಸಿನ್ ಅವರನ್ನು ಪಾಲಂ ತಾಂತ್ರಿಕ ಪ್ರದೇಶದಿಂದ ಆಸ್ಪತ್ರೆಗೆ ವೈದ್ಯಕೀಯ ಸಿಬ್ಬಂದಿಯ ಸುಪರ್ದಿಯಲ್ಲಿ ಕರೆದೊಯ್ಯಲಾಯಿತು. ಅವರ ಕೈ, ಹೆಬ್ಬೆರಳು ಹಾಗೂ ತೋರುಬೆರಳನ್ನು ಮರುಜೋಡಿಸಲು ತೀರಾ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಲಾಯಿತು. ಗೈಲ್ಸಿನ್ ಅವರ ಆರೋಗ್ಯ ಈಗ ಸ್ಥಿರವಾಗಿದೆ.
'ಯೋಧರ ಕೈಬಿಡಬಾರದು, ಸವಾಲಿನ ಸಂದರ್ಭಗಳಲ್ಲಿಯೂ ಸಾಧ್ಯವಿರುವಮಟ್ಟಿಗೆ ಅತ್ಯುತ್ತಮ ರೀತಿಯಲ್ಲಿ ಸೌಲಭ್ಯ ಒದಗಿಸಬೇಕು ಎಂದು ಸೇನೆ ಪ್ರತಿಪಾದಿಸುವ ಮೌಲ್ಯಗಳನ್ನು ಈ ಘಟನೆಯು ತೋರಿಸಿಕೊಟ್ಟಿದೆ' ಎಂದು ಅಧಿಕಾರಿ ಹೇಳಿದರು.