HEALTH TIPS

ಆತಿಶಿ, ಸೌರಭ್‌ ಹೆಸರು ಉಲ್ಲೇಖಿಸಿದ ಕೇಜ್ರಿವಾಲ್‌: ಜಾರಿ ನಿರ್ದೇಶನಾಲಯ

            ವದೆಹಲಿ: ಅಬಕಾರಿ ನೀತಿ ಹಗರಣದ ಆರೋಪಿ ವಿಜಯ್‌ ನಾಯರ್‌ ಜೊತೆಗೆ ತಮ್ಮ ಸಂಬಂಧ ಸೀಮಿತವಾಗಿತ್ತು. ಆದರೆ, ದೆಹಲಿಯ ಸಚಿವರಾದ ಆತಿಶಿ ಮರ್ಲೆನಾ ಮತ್ತು ಸೌರಭ್‌ ಭಾರದ್ವಾಜ್‌ ಅವರ ನಿರ್ದೇಶನದಂತೆ ನಾಯರ್‌ ಕೆಲಸ ಮಾಡುತ್ತಿದ್ದರು ಎಂಬುದಾಗಿ ದೆಹಲಿಯ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ದೆಹಲಿಯ ನ್ಯಾಯಾಲಯಕ್ಕೆ ಸೋಮವಾರ ಹೇಳಿದೆ.

              ಈ ಪ್ರಕರಣದಲ್ಲಿ ಮಾರ್ಚ್‌ 21ರಂದು ಬಂಧಿತರಾಗಿರುವ ಕೇಜ್ರಿವಾಲ್‌ ಅವರು ತನಿಖೆಗೆ ಸಹಕರಿಸುತ್ತಿಲ್ಲ. ಹಾರಿಕೆಯ ಉತ್ತರಗಳನ್ನು ಕೊಡುತ್ತಿದ್ದಾರೆ. ಕಸ್ಟಡಿ ವಿಚಾರಣೆ ಸಂದರ್ಭದಲ್ಲಿಯೂ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂದು ಇ.ಡಿ. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ಮುಂದೆ ಆರೋಪಿಸಿದೆ.

             ತಾವು ದೆಹಲಿಯ ಸಚಿವರೊಬ್ಬರ ಬಂಗಲೆಯಲ್ಲಿ ನೆಲೆಸಿ, ಮುಖ್ಯಮಂತ್ರಿಯವರ ಕ್ಯಾಂಪ್‌ ಕಚೇರಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದುದಾಗಿ ವಿಜಯ್‌ ನಾಯರ್‌ ಹೇಳಿದ್ದಾರೆ. ಅಬಕಾರಿ ನೀತಿ ಹಗರಣದಲ್ಲಿ ಮೊದಲಿಗೆ ನಾಯರ್‌ ಅವರನ್ನು ಬಂಧಿಸಲಾಗಿದೆ.

              ಮುಖ್ಯಮಂತ್ರಿಯವರ ಕ್ಯಾಂಪ್‌ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಎಎಪಿಯ ಇತರ ಮುಖಂಡರ ಜೊತೆಗೆ ಕೆಲಸ ಕಾರ್ಯಗಳ ವಿವರಗಳನ್ನು ಯಾಕೆ ಹಂಚಿಕೊಳ್ಳಬೇಕು ಎಂಬ ಪ್ರಶ್ನೆಯನ್ನು ಕೇಜ್ರಿವಾಲ್‌ ಅವರಿಗೆ ಕೇಳಲಾಗಿದೆ. ಆದರೆ, ಅದಕ್ಕೆ ಅವರು ಸಮರ್ಪಕ ಉತ್ತರ ಕೊಟ್ಟಿಲ್ಲ. ಕ್ಯಾಂಪ್‌ ಕಚೇರಿಯು ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತದೆಯೇ ಹೊರತು ಎಎಪಿಗಾಗಿ ಅಲ್ಲ ಎಂದು ಅವರಿಗೆ ಹೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಜ್ರಿವಾಲ್‌ ಅವರು, ಕ್ಯಾಂಪ್‌ ಕಚೇರಿಯಲ್ಲಿ ಯಾರು ಕೆಲಸ ಮಾಡುತ್ತಿದ್ದರು ಎಂಬುದು ತಮಗೆ ತಿಳಿದಿಲ್ಲ ಎಂಬ ಹಾರಿಕೆಯ ಉತ್ತರವನ್ನು ಕೊಟ್ಟಿದ್ದಾರೆ ಎಂದು ಇ.ಡಿ ವಾದಿಸಿದೆ.

                ಸಹ ಆರೋಪಿಗಳು ಮತ್ತು ಮದ್ಯದ ವ್ಯಾಪಾರದಲ್ಲಿ ತೊಡಗಿರುವವರ ಜೊತೆಗೆ ನಾಯರ್‌ ಅವರು 10 ಸಭೆಗಳನ್ನು ನಡೆಸಿದ್ದರ ಪುರಾವೆಗಳನ್ನು ತೋರಿಸಲಾಯಿತು. ಹಾಗಿದ್ದರೂ ಅವರು ತಮಗೇನೂ ಅರಿವಿಲ್ಲ ಎಂದರು ಎಂದು ಇ.ಡಿ ಆರೋಪಿಸಿದೆ.

ಕೇಜ್ರಿವಾಲ್‌ ಅವರು ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಸಂಚುಕೋರ. ಏಕೆಂದರೆ 2021-22ರಲ್ಲಿ ಈ ನೀತಿ ರೂಪಿಸುವಿಕೆಯಲ್ಲಿ ಅವರು ಭಾಗಿಯಾಗಿದ್ದರು. ಕೆಲವು ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಮೂಲಕ ₹100 ಕೋಟಿಗೂ ಹೆಚ್ಚು ಲಂಚ ಪಡೆಯಲಾಗಿದೆ. ಹವಾಲಾ ಮೂಲಕ ಪಡೆದ ಈ ಹಣದಲ್ಲಿ ₹45 ಕೋಟಿಯನ್ನು ಗೋವಾ ಚುನಾವಣೆಗೆ ಖರ್ಚು ಮಾಡಲಾಗಿದೆ ಎಂದು ಇ.ಡಿ. ಪ್ರತಿಪಾದಿಸುತ್ತಿದೆ.

       15ರ ವರೆಗೆ ನ್ಯಾಯಾಂಗ ಬಂಧನ

           ಕೇಜ್ರಿವಾಲ್‌ ಅವರನ್ನು ಇನ್ನಷ್ಟು ವಿಚಾರಣೆ ನಡೆಸುವ ಅಗತ್ಯವಿದೆ. ಅವರನ್ನು ಇನ್ನೂ 15 ದಿನ ತನ್ನ ವಶಕ್ಕೆ ನೀಡಬೇಕು ಎಂದು ಇ.ಡಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ಗೆ ಮನವಿ ಸಲ್ಲಿಸಿತು.

            ವಿಚಾರಣೆ ಆಲಿಸಿದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಅಂತಿಮವಾಗಿ ಕೇಜ್ರಿವಾಲ್ ಅವರನ್ನು ಏ. 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಆದೇಶದ ಹಿಂದೆಯೇ ಕೇಜ್ರಿವಾಲ್ ಅವರನ್ನು ತಿಹಾರ್‌ ಜೈಲಿಗೆ ಕರೆದೊಯ್ಯಲಾಯಿತು.

           ಪ್ರಧಾನಿ ವಿರುದ್ಧ ಟೀಕೆ: ಕೋರ್ಟ್‌ ಸಭಾಂಗಣ ಪ್ರವೇಶಿಸುವ ಮೊದಲು ಸುದ್ದಿಗಾರರ ಜೊತೆಗೆ ಮಾತನಾಡಿದ ಕೇಜ್ರಿವಾಲ್ ತಮ್ಮ ಬಂಧನವನ್ನು ಉಲ್ಲೇಖಿಸಿ, 'ಪ್ರಧಾನಿ ಅವರ ಈ ನಡೆಯು ದೇಶದ ದೃಷ್ಟಿಯಿಂದ ಒಳ್ಳೆಯದಲ್ಲ' ಎಂದು ಅಭಿಪ್ರಾಯಪಟ್ಟರು.

               ಕೇಜ್ರಿವಾಲ್ ಅವರ ಪತ್ನಿ ಸುನೀತಾ, ಎಎಪಿ ಸಚಿವರಾದ ಆತಿಶಿ, ಸೌರಭ್‌ ಭಾರದ್ವಾಜ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

                    ವಿಶೇಷ ಕೋರ್ಟ್‌ಗೆ ವರದಿ -ಹೈಕೋರ್ಟ್ ಸೂಚನೆ

             'ಕೇಜ್ರಿವಾಲ್ ಅವರು ಬಂಧನದ ಅವಧಿಯಲ್ಲಿ ದೆಹಲಿ ಮುಖ್ಯಮಂತ್ರಿ ಅಧಿಕಾರ ಬಳಸಿ ಆದೇಶ ಹೊರಡಿಸಿದ್ದಾರೆ' ಎಂಬ ಕುರಿತು ವಿಶೇಷ ನ್ಯಾಯಾಧೀಶರ ಬಳಿ ಹೇಳಿಕೆ ದಾಖಲಿಸಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೆಹಲಿ ಹೈಕೋರ್ಟ್ ಆದೇಶಿಸಿದೆ.

               ಪ್ರಭಾರ ಮುಖ್ಯ ನ್ಯಾಯಮೂರ್ತಿ ಮನಮೋಹನ್, ನ್ಯಾಯಮೂರ್ತಿ ಮನ್‌ಮೀತ್ ಪಿ.ಎಸ್‌. ಅರೋರಾ ಅವರಿದ್ದ ಪೀಠ ಸೋಮವಾರ ಈ ಸೂಚನೆಯೊಂದಿಗೆ, ಆದೇಶ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ ಮಾಡಿತು.

            'ಕೇಜ್ರಿವಾಲ್‌ ಭಾಗಿಯಾಗಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಕೋರ್ಟ್‌, ಅಗತ್ಯವಿದ್ದರೆ ನಿಯಮಾನುಸಾರ ಆದೇಶ ಹೊರಡಿಸಬಹುದು' ಎಂದು ತಿಳಿಸಿತು.

ಜೈಲಿನಲ್ಲಿರಿಸುವುದೇ ಬಿಜೆಪಿಯ ಏಕೈಕ ಗುರಿ-ಸುನೀತಾ

            : 'ಲೋಕಸಭೆ ಚುನಾವಣೆಯ ಅವಧಿಯಲ್ಲಿ ಕೇಜ್ರಿವಾಲ್ ಅವರು ಜೈಲಿನಲ್ಲಿರಬೇಕು' ಎಂಬುದೇ ಬಿಜೆಪಿಯ ಏಕಮಾತ್ರ ಗುರಿಯಾಗಿದೆ' ಎಂದು ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಆರೋಪಿಸಿದರು.

                  ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು 'ಕೇಜ್ರಿವಾಲ್‌ರನ್ನು 11 ದಿನ ತನಿಖೆಗೆ ಒಳಪಡಿಸಲಾಗಿದೆ. ತಪ್ಪಿತಸ್ಥ ಎಂದು ಕೋರ್ಟ್ ಘೋಷಿಸಿಲ್ಲ. ಆದರೂ ಅವರನ್ನು ಏಕೆ ಜೈಲಿನಲ್ಲಿ ಇಡಲಾಗಿದೆ' ಎಂದು ಪ್ರಶ್ನಿಸಿದರು.

ದೇಶದ ಜನರು ಇಂತಹ ನಿರಂಕುಶ ಆಡಳಿತಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದೂ ಅವರು ಪ್ರತಿಕ್ರಿಯಿಸಿದರು.

               ಇ.ಡಿ ತನಿಖೆಗೆ ಒತ್ತಾಯಿಸಿದ್ದೇ ಕಾಂಗ್ರೆಸ್ ಪಕ್ಷ -ಕೇರಳ ಸಿ.ಎಂ

ಕೋಯಿಕ್ಕೋಡ್: 'ದೆಹಲಿ ಅಬಕಾರಿ ನೀತಿ ಹಗರಣ ಕುರಿತಂತೆ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆಗೆ ಕಾಂಗ್ರೆಸ್ ಪಕ್ಷವೇ ಒತ್ತಾಯಿಸಿತ್ತು' ಎಂದು ಕೇರಳ ಸಿ.ಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಸಿಪಿಎಂ ನಾಯಕರೂ ಆದ ಪಿಣರಾಯಿ ವಿಜಯನ್ ಅವರ ಈ ಹೇಳಿಕೆಯನ್ನು ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿಕ್ಕಟ್ಟು ಎಂದೇ ಹೇಳಲಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟ ದೆಹಲಿಯಲ್ಲಿ ರ‍್ಯಾಲಿ ನಡೆಸಿದ ಹಿಂದೆಯೇ ಈ ಹೇಳಿಕೆ ಹೊರಬಿದ್ದಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್ ಅವರು 'ದೆಹಲಿ ಸರ್ಕಾರದ ವಿರುದ್ಧ ಆರೋಪವನ್ನು ಹೊರಿಸಿ ಇ.ಡಿ ತನಿಖೆಗೆ ಆಗ್ರಹಪಡಿಸಿದ್ದು ಹಾಗೂ ದೂರು ದಾಖಲಿಸಿದ್ದು ಇದೇ ಕಾಂಗ್ರೆಸ್ ಪಕ್ಷ' ಎಂದು ಹೇಳಿದರು.

'ಮನೀಶ್‌ ಸಿಸೋಡಿಯಾ ಅವರ ಬಂಧನವಾದಾಗ 'ಕೇಜ್ರಿವಾಲ್‌ರನ್ನು ಏಕೆ ಬಂಧಿಸಿಲ್ಲ' ಎಂದು ಪ್ರಶ್ನಿಸಿದ್ದು ಇದೇ ಕಾಂಗ್ರೆಸ್. ಈಗ ಅದರ ನಿಲುವು ಬದಲಾಗಿದೆ. ಇದು ಸ್ವಾಗತಾರ್ಹ. ಆ ಪಕ್ಷಕ್ಕೆ ತಪ್ಪಿನ ಅರಿವಾಗಿದೆ' ಎಂದು ಹೇಳಿದರು.

            ಕೇಜ್ರಿವಾಲ್ ಬಂಧನ ವಿರೋಧಿಸಿ ದೆಹಲಿಯಲ್ಲಿ ನಡೆದ ರ‍್ಯಾಲಿ ಉಲ್ಲೇಖಿಸಿದ ಪಿಣರಾಯಿ ವಿಜಯನ್‌ ಅವರು 'ಬಿಜೆಪಿಯ ನಡೆಯನ್ನು ವಿರೋಧಿಸಿ ನಾವು ಒಟ್ಟಾಗಿ ನಿಲ್ಲುವುದು ಅನಿವಾರ್ಯವು ಆಗಿತ್ತು' ಎಂದು ಹೇಳಿದರು.

              ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ಪ್ರತಿಪಕ್ಷಗಳನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುತ್ತಿದೆ ಎಂದೂ ಹೇಳಿದರು.


       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries