ನವದೆಹಲಿ: ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಮತದಾನವು ಬೆಳಿಗ್ಗೆ 7 ಗಂಟೆಗೆ ಶುರುವಾಗಿದ್ದು, ಸಂಜೆ 6ಕ್ಕೆ ಮುಕ್ತಾಯವಾಯಿತು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕ ಕೆ ಪಳನಿಸ್ವಾಮಿ ಸೇಲಂನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮೊದಲ ಹಂತದ ಮತದಾನದಲ್ಲಿ 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮತ ಚಲಾಯಿಸಲು 16.63 ಕೋಟಿಗೂ ಹೆಚ್ಚು ಮಂದಿ ಅರ್ಹತೆ ಪಡೆದಿದ್ದಾರೆ.
ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲರು ಕೂಡ ಇದ್ದಾರೆ. ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಯನ್ನು ನೆಚ್ಚಿಕೊಂಡಿದೆ. 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಎನ್‍ಡಿಎಗೆ ಸವಾಲು ಒಡ್ಡುವ ಪಣ ತೊಟ್ಟಿವೆ.
ಏಳು ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಶುಕ್ರವಾರ ನಡೆಯಲಿರುವ ಹಂತವು ಅತಿದೊಡ್ಡದು. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ವಿಧಾನಸಭೆಗಳ ಒಟ್ಟು 92 ಕ್ಷೇತ್ರಗಳಿಗೆ ಕೂಡ ಶುಕ್ರವಾರ ಮತದಾನ ನಡೆದಿದೆ.