ಹೈದರಾಬಾದ್: ಉಚಿತ ಕೊಡುಗೆಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 'ಶ್ವೇತಪತ್ರ' ಹೊರಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ಡಿ. ಸುಬ್ಬರಾವ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಹೇಗೆ ನಿರ್ಬಂಧ ಹೇರಬಹುದು ಎಂಬುದರ ಕುರಿತು ಕೂಲಂಕಷ ಚರ್ಚೆ ಆಗಬೇಕು. ಉಚಿತ ಕೊಡುಗೆಗಳ ಯೋಜನೆಗೆ ತಗಲುವ ಖರ್ಚು, ವೆಚ್ಚ ಮತ್ತು ಅದರ ಪ್ರಯೋಜನಗಳ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಅಲ್ಲದೆ ಈ ಕುರಿತು ಜನರಿಗೆ ಶಿಕ್ಷಣ ನೀಡುವ ಜವಾಬ್ದಾರಿಯೂ ಸರ್ಕಾರದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದು ಅಂತಿಮವಾಗಿ ರಾಜಕೀಯ ವಿಷಯ. ಹೀಗಾಗಿ ಈ ಬಗ್ಗೆ ರಾಜಕೀಯವಾಗಿ ಒಮ್ಮತ ಇರಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರೇ ನಾಯಕತ್ವ ವಹಿಸಿಕೊಳ್ಳುವುದು ಸೂಕ್ತ. ಆದ್ದರಿಂದಲೇ ಅವರು ಈ ಬಗ್ಗೆ ಶ್ವೇತಪತ್ರ ಹೊರಡಿಸಿ, ಒಮ್ಮತ ಸೃಷ್ಟಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಉಚಿತ ಕೊಡುಗೆಗಳ ಸಾಧಕ- ಬಾಧಕಗಳ ಕುರಿತು ಜನರಿಗೆ ಶಿಕ್ಷಣ ನೀಡಬೇಕು. ಅದನ್ನು ಹೇಗೆ ಜಾರಿಗೊಳಿಸಬಹುದು ಮತ್ತು ಹೇಗೆ ನಿಗಾ ಇಡಬಹುದು ಎಂಬುದು ಜನರಿಗೆ ಗೊತ್ತಿರಬೇಕು ಎಂದು ಅವರು ಪಿಟಿಐ ಜತೆಗಿನ ಸಂವಾದದಲ್ಲಿ ತಿಳಿಸಿದ್ದಾರೆ.
ಭಾರತದಂತಹ ಬಡ ದೇಶದಲ್ಲಿ ಅತ್ಯಂತ ದುರ್ಬಲ ವರ್ಗಗಳಿಗೆ ಸುರಕ್ಷತಾ ಸಂರಕ್ಷಣೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಇವುಗಳನ್ನು ಎಷ್ಟು ವರ್ಷ ವಿಸ್ತರಿಸಬಹುದು ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
'ಈ ಸಂಬಂಧ ಒದಗಿಸಲಾದ ಹಣವು ಸದ್ಬಳಕೆ ಆಗಿದೆಯೇ ಅಥವಾ ಯೋಜನೆಯನ್ನು ಇನ್ನೂ ಉತ್ತಮ ಪಡಿಸಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ಹೀಗಾಗಿಯೇ ಉಚಿತ ಕೊಡುಗೆಗಳ ಬಗ್ಗೆ ಹೆಚ್ಚು ಜಾಗೃತಿ ಮತ್ತು ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಅಲ್ಲದೆ ಈ ವಿಷಯದಲ್ಲಿ ರಾಜಕೀಯ ಪಕ್ಷಗಳ ಮೇಲೆ ಹೇಗೆ ಸ್ವಲ್ಪ ಮಟ್ಟಿಗೆ ನಿರ್ಬಂಧ ವಿಧಿಸಬಹುದು ಎಂಬುದರ ಕುರಿತು ಚರ್ಚೆಯಾಗಬೇಕಿದೆ' ಎಂದಿದ್ದಾರೆ.
ಕೆಲ ರಾಜ್ಯಗಳು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆಯ (ಎಫ್‌ಆರ್‌ಬಿಎಂ) ಮಿತಿಗಳನ್ನು ದಾಟಿವೆ ಎಂದ ಅವರು, 'ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಎಫ್‌ಆರ್‌ಬಿಎಂ ಗುರಿಗಳಿಗೆ ಬದ್ಧರಾಗಿರಬೇಕು' ಎಂದು ಹೇಳಿದ್ದಾರೆ.
ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು 2047ರವರೆಗೆ ಸತತವಾಗಿ ಶೇ 7.6ರಷ್ಟು ದರದಲ್ಲಿ ಅಭಿವೃದ್ಧಿ ಹೊಂದಬೇಕು ಎಂದು ಐಎಂಎಫ್ ಅಧ್ಯಯನ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.