ಕೋಝಿಕ್ಕೋಡ್: ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ವ್ಯಕ್ತಿಯೊಬ್ಬ ಆರೋಗ್ಯ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕುಂದಮಂಗಲದಲ್ಲಿ ನಡೆದಿದೆ. ಅನಪಾರ ಕುಟುಂಬ ಆರೋಗ್ಯ ಕೇಂದ್ರದ ಉದ್ಯೋಗಿ ಬಿಂದು ಹಲ್ಲೆಗೊಳಗಾದವರು.
ಘಟನೆ ಹಿನ್ನೆಲೆಯಲ್ಲಿ ಆರೋಪಿ ಚೆರುವತ್ತೂರು ಮೂಲದ ಅಬ್ದುಲ್ಲಾ ಎಂಬಾತ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ರಸ್ತೆಯಲ್ಲಿ ಭಯಭೀತಿ ಸೃಷ್ಟಿಸುತ್ತಿದ್ದಾನೆ ಎಂದು ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೋಲೀಸರು ಅಬ್ದುಲ್ಲಾನನ್ನು ವಶಕ್ಕೆ ತೆಗೆದುಕೊಂಡರು. ನಂತರ, ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಅನಪಾರ ಕುಟುಂಬ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಅಬ್ದುಲ್ಲಾನನ್ನು ಪರೀಕ್ಷಿಸಲು ಬಂದ ಬಿಂದುವಿನ ಮೇಲೆ ತಳ್ಳಿ ಹಲ್ಲೆ ನಡೆಸಿದ್ದಾನೆ.
ಪೋಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ಬಲವಂತವಾಗಿ ಆತನನ್ನು ಸದೆಬಡಿದಿದ್ದಾರೆ. ದಾಳಿಯಲ್ಲಿ ಬಿಂದುವಿನ ತುಟಿ ಮತ್ತು ಮೂಗಿಗೆ ಗಾಯವಾಗಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.