ಪಟ್ನಾ : ಪಟ್ನಾದ ಹೊರವಲಯದಲ್ಲಿ ಜೆಡಿಯು ನಾಯಕ ಸೌರವ್ ಕುಮಾರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಸೌರವ್ ಅವರ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿ 12.15ರ ಸುಮಾರಿಗೆ ಸೌರವ್ ಮತ್ತು ಮುನ್ಮುನ್ ಕುಮಾರ್ ವಿವಾಹ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
'ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೌರವ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಗಾಯಗೊಂಡ ಮುನ್ಮುನ್ ಅವರ ಆರೋಗ್ಯ ಸ್ಥಿರವಾಗಿದೆ. ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪ್ರಕರಣದ ತನಿಖೆಗಾಗಿ ನಾವು ವಿಶೇಷ ತಂಡವನ್ನು ರಚಿಸಿದ್ದೇವೆ. ಈ ಸಂಬಂಧ ಕೆಲ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದೇವೆ' ಎಂದು ಪಟ್ನಾ ಎಸ್‌ಎಸ್‌ಪಿ ರಾಜೀವ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್‌ಜೆಡಿ ನಾಯಕಿ ಮಿಸಾ ಭಾರತಿ ಸೌರವ್ ಕುಮಾರ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
'ಬಿಹಾರದಲ್ಲಿ ಅಧಿಕಾರದಲ್ಲಿರುವ ಪಕ್ಷದ ನಾಯಕರೇ ಸುರಕ್ಷಿತವಾಗಿಲ್ಲ. ಹಾಗಾದರೆ ಸಾರ್ವಜನಿಕರ ಸ್ಥಿತಿ ಹೇಗೆ?. ಎನ್‌ಡಿಎ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ' ಎಂದು ಆರ್‌ಜೆಡಿ ಹಿರಿಯ ನಾಯಕ ಮತ್ತು ಪಕ್ಷದ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
'ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಆದರೆ, ಈ ವಿಷಯವನ್ನು ರಾಜಕೀಯಗೊಳಿಸಬಾರದು. ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು' ಎಂದು ಜೆಡಿಯು ನಾಯಕ ನೀರಜ್ ಕುಮಾರ್ ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.