ಕಾಸರಗೋಡು: ಭಾರತ ದೇಶವನ್ನು ರಾಮರಾಜ್ಯವನ್ನಾಗಿಸುವ ಪ್ರದಾನಿ ನರೇಂದ್ರ ಮೋದಿ ಅವರ ಶ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಅವರು ಕಾಸರಗೊಡು ತಾಳಿಪಡ್ಪು ಮೈದಾನದಲ್ಲಿ ವಿಶೇಷವಾಗಿ ಸಜ್ಜುಗೊಳಿಸಲಾದ ಬೃಹತ್ ಸಭಾಂಗಣದಲ್ಲಿ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಅವರ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದರು.
ಟೆಂಟಿನೊಳಗಿದ್ದ ರಾಮಲಲ್ಲಾ ವಿಗ್ರಹಕ್ಕೆ 500ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದ್ದು, ರಾಮನವಮಿಯ ಪರ್ವಕಾಲವನ್ನು ಮೊದಲ ಬಾರಿಗೆ ದರ್ಶಿಸುವ ಅವಕಾಶ ದೇಶದ ಜನತೆಗೆ ಲಭ್ಯವಾಗಿದೆ. ಶ್ರೀರಾಮಚಂದ್ರ ಕೇವಲ ದೇವರಲ್ಲ, ಶ್ರೀರಾಮ ದೇಶದ ಸಾಂಸ್ಕøತಿಕ ಪ್ರತೀಕವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಹಾಗೂ ಎಡರಂಗಗಳು ಪ್ರಬಲ ವಿರೋಧ ತಂದೊಡ್ಡುವ ಮೂಲಕ ತಮ್ಮ ತುಷ್ಟಿಕರಣ ನೀತಿಯನ್ನು ಸಾಬೀತುಗೊಳಿಸಿದೆ. ಪ್ರತಿಪಕ್ಷಗಳ ವಿರೋಧದ ನಡುವೆ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ, ಪ್ರಪಂಚದ ತೃತೀಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ದಾಪುಗಾಲಿಡುತ್ತಿದೆ. ಮೋದಿ ಗ್ಯಾರಂಟಿಗಳಿಂದ ದೇಶ ಸಮರ್ಥವಾಗಿ ಮುನ್ನಡೆಯುತ್ತಿದೆ. ದೇಶದ ರೈತರಲ್ಲಿ ಶಕ್ತಿ ತುಂಬುವ ಕಿಸಾನ್ ಸಮ್ಮಾನ್ ಯೋಜನೆ ಯಶಸ್ವಿಯಾಗಿ ಮುಂದುವರಿಯಲಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆ, ಭಾರತ್ ಮಾಲಾ ಯೋಜನೆ, ಪ್ರಧಾನಮಂತ್ರಿ ಆವಾಜ್ ಆಯುಷ್ಮಾನ್ ಭಾರತ್, ಎಕ್ಸ್‍ಪ್ರೆಸ್ ಹೈವೇ, ಯಶಸ್ವೀ ಚಂದ್ರಯಾನ್ -3 ಮುಂತಾದ ಯೋಜನೆಗಳು ಭಾರತದ ಅಭಿವೃದ್ಧಿಗೆ ಮಹತ್ತರವಾದ ಶಕ್ತಿ ತಂದುಕೊಟ್ಟಿದೆ. ನಾವು ಹೇಳಿದ್ದನ್ನೇ ಮಾಡುತ್ತೆವೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವುದನ್ನು, ಜಾರಿಗೆ ತಂದಿರುವುದಾಗಿ ಹೆಮ್ಮೆಯಿಂದ ಹೇಳುತ್ತೇವೆ ಎಂದು ತಿಳಿಸಿದರು.
ಉಭಯ ರಂಗಗಳಿಂದ ರಾಜ್ಯ ದಿವಾಳಿ:
ಕೇರಳವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿರುವ ಎಡರಂಗ ಹಾಗೂ ಐಕ್ಯರಂಗವನ್ನು ಕಿತ್ತೊಗೆಯುವ ಕಾಲಸನ್ನಿಹಿತವಾಗಿದೆ. ಕೇರಳದ ಮೀನುಗಾರರ ಅಬಿವೃದ್ಧಿಗೆ ಹತ್ತು ಹಲವು ಯೋಜನೆ ಜಾರಿಗೊಳಿಸಬಹುದಾಗಿದ್ದರೂ, ಈ ಬಗ್ಗೆ ನಿರ್ಲಕ್ಷ್ಯ ತೋರಿದ ಕೇರಳದ ಉಭಯರಂಗಗಳಿಗೆ ಸಡ್ಡುಹೊಡೆಯುವ ರೀತಿಯಲ್ಲಿ ನರೇಂದ್ರ ಮೋದಿ ಸರ್ಕಾರ ಹತ್ತು ಹಲವು ಯೋಜನೆ ಜಾರಿಗೆ ತಂದಿದೆ. ತ್ರಿವಳಿ ತಲಾಖ್, 370ನೇ ವಿಧಿ ರದ್ದು, ಸಮಾನ ನಾಗರಿಕ ಕಾಯ್ದೆ ದೇಶದ ಏಕತೆಗೆ ಬಲ ತಂದುಕೊಟ್ಟಿದೆ.
ಕೇರಳದಲ್ಲಿ ಎಡರಂಗ ಹಾಗೂ ಐಕ್ಯರಂಗ ನಡೆಸುತ್ತಿರುವ ತುಷ್ಟೀಕರಣ ನೀತಿಯಿಂದ ಭಯೋತ್ಪಾದಕ ಸಂಘಟನೆಗಳಿಗೆ ಬಲಹೆಚ್ಚಲು ಕಾರಣವಾಗುತ್ತಿದೆ. ನಿಷೇಧಿತ ಸಂಘಟನೆಗಳಿಗೆ ಎರಡೂ ರಂಗಗಳು ನಿರಂತರ ನೀಡುತ್ತಿರುವ ಬೆಂಬಲದಿಂದ ದೇಶದಲ್ಲಿ ಕೋಮುಶಕ್ತಿಗಳು ಬೇರೊಂದು ಹೆಸರಲ್ಲಿ ತನ್ನ ಚಟುವಟಿಕೆಯಲ್ಲಿ ಸಕ್ರಿಯವಾಗುತ್ತಿದೆ ಎಂದು ತಿಳಿಸಿದರು.
ಸಿಪಿಎಂ ಹೊರಡಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಪರಮಾಣು ಬಳಕೆ ನಿಷೇಧಿಸುವ ಧೋರಣೆ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ವ್ಯಕ್ತಪಡಿಸಬೇಕು. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಹುಚ್ಚಾಟ ನಡೆಸುತ್ತಿರುವುದಾಗಿ ಟೀಕಿಸಿದರು.
ಸಹಕಾರಿ ಸಂಘಗಳಿಗೆ ಕೇಂದ್ರದ ಅಭಯ:
ಕೇರಳದಲ್ಲಿನ ಸಹಕಾರಿ ಸಂಘಗಳಲ್ಲಿ ಬಡ ಜನತೆ ಠೇವಣಿಯಿರಿಸಿರುವ ಹಣವನ್ನು ದೋಚಲು ಸಿಪಿಎಂ ಮುಖಂಡರಿಗೆ ಕೇಂದ್ರ ಸರ್ಕಾರ ಅವಕಾಶ ನೀಡದು. ಕೇರಳದಲ್ಲಿನ ಸಹಕಾರಿ ಬ್ಯಾಂಕುಗಳಲ್ಲಿ ಬಡಜನತೆ ಇರಿಸಿರುವ ಹಣವನ್ನು ಸಿಪಿಎಂ ಮುಖಂಡರು ಕೊಳ್ಳೆ ಹೊಡೆಯುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡದು. ಸಿಪಿಎಂ ಮುಖಂಡರು ಕೊಳ್ಲೆ ಹೊಡೆದಿರುವ ಠೇವಣಿದಾರರ 90ಕೋಟಿ ರೂ. ಅವರ ಖಾತೆಗೆ ವಾಪಾಸುಮಾಡಲು ಕೇಂದ್ರ ಸರ್ಕಾರ ಎಲ್ಲ ಕ್ರಮ ಕ್ಯಗೊಳ್ಳಲಿದೆ. ಐಕ್ಯರಂಗ-ಎಡರಂಗದ ಕೊಳ್ಳೆ ರಾಜಕೀಯ ಕೊನೆಗೊಳಿಸಲು ಜನತೆ ಎನ್‍ಡಿಎ ಬೆಂಬಲಿಸಬೇಕು ಎಂದು ತಿಳಿಸಿದರು.
ರಾಜನಾಥ್ ಸಿಂಗ್ ಹೇಳಿದ್ದು.....
*'ಕೇರಳ ದೇವರ ಸ್ವಂತ ನಾಡು' ಎಂಬುದು ಇಲ್ಲಿನ ಸೌಂದರ್ಯ ನೋಡುವಾಗ ಸಾಬೀತಾಗಿದೆ.
*ಕಾಸರಗೋಡಿನ ಮಣ್ಣು ಕೃಷ್ಣೈಕ್ಯ ಎಡನಿರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರ ಕಾನೂನು ಹೋರಾಟದ ಮಣ್ಣಾಗಿದೆ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸಂವಿಧಾನದ ರಕ್ಷಣೆಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದ ಮಹಾನುಭಾವರಾಗಿದ್ದಾರೆ.
*'ಮೋದಿಯುಡೆ ಗ್ಯಾರಂಟಿ'ಎಂಬುದಾಗಿ ಹಲವು ಬಾರಿ ಉದ್ಗರಿಸುವ ಮೂಲಕ ಗಮನ ಸೆಳೆದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಜ್‍ನಾಥ್ ಸಿಂಗ್ ಅವರ ಹಿಂದಿ ಭಾಷಣವನ್ನು ಕೇರಳದ ಬಿಜೆಪಿ ಮುಖಂಡ ಸಿ. ಪದ್ಮನಾಭನ್ ಮಲಯಾಳಕ್ಕೆ ಭಾಷಾಂತರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್, ಕಾಸರಗೋಡು ಎನ್‍ಡಿಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ, ಬಿಜೆಪಿ ಮುಖಂಡರಾದ ರಂಜಿತ್ ಎ, ವಿ. ರವೀಂದ್ರನ್, ಎಂ. ಸಂಜೀವ ಶೆಟ್ಟಿ, ಪ್ರಮಿಳಾ ಸಿ ನಾಯ್ಕ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ, ವಕೀಲ ಎಂ. ನಾರಾಯಣ ಭಟ್ ಸ್ವಾಗತಿಸಿದರು. ಎ.ವೇಲಾಯುಧನ್ ವಂದಿಸಿದರು.