ನವದೆಹಲಿ: ಸ್ಪಾ ಹಾಗೂ ಮಸಾಜ್ ಕೇಂದ್ರಗಳಲ್ಲಿ ಪುರುಷ ಹಾಗೂ ಮಹಿಳೆ ಪರಸ್ಪರ ಮಸಾಜ್ ನಡೆಸುವುದಕ್ಕೆ ನಿಷೇಧ ಹೇರುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
2021ರ ಆ. 18ರಂದು ದೆಹಲಿ ಸರ್ಕಾರವು ಸ್ಪಾ ಹಾಗೂ ಮಸಾಜ್ ಪಾರ್ಲರ್‌ಗಳಿಗೆ ಹೊರಡಿಸಿದ್ದ ಮಾರ್ಗಸೂಚಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ ಇತ್ಯರ್ಥಗೊಳಿಸಿತ್ತು.
ಸ್ಪಾ ಹಾಗೂ ಮಸಾಜ್ ಕೇಂದ್ರಗಳಲ್ಲಿನ ಧ್ವನಿ ಹಾಗೂ ವಿಡಿಯೊ ರೆಕಾರ್ಡಿಂಗ್‌ಗಳನ್ನು ನಿರಂತರವಾಗಿ ದೆಹಲಿ ಮಹಿಳಾ ಆಯೋಗಕ್ಕೆ ಸಲ್ಲಿಸಲು ಸೂಚಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
'ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪುರುಷ-ಮಹಿಳೆ ಪರಸ್ಪರ ಮಸಾಜ್ ಮಾಡುವ ಬಹಳಷ್ಟು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳು 2021ರ ಆ. 18ರಂದು ಹೊರಡಿಸಿದ್ದ ಮಾರ್ಗಸೂಚಿಗೆ ವಿರುದ್ಧವಾದ ಕಾರ್ಯಗಳನ್ನು ಮಾಡುತ್ತಿವೆ. ಬಾಗಿಲು ಮುಚ್ಚಿಕೊಂಡು ಮಸಾಜ್ ಮಾಡಲಾಗುತ್ತಿದೆ. ಇಂಥ ಕೇಂದ್ರಗಳು ವೇಶ್ಯಾವಾಟಿಕೆ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತಂತೆ ಪೊಲೀಸರಿಗೆ ನಿರಂತರ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಅರ್ಜಿದಾರರು ಪೀಠದ ಗಮಕ್ಕೆ ತಂದರು.
2021ರಲ್ಲಿ ಏಕ ಸದಸ್ಯ ಪೀಠದ ಎದುರು ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆದು, ಇಂಥ ಕೇಂದ್ರಗಳನ್ನು ಪರಿಶೀಲಿಸಿ, ತಪ್ಪುಗಳಿದ್ದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿತ್ತು.