ಕುಂಬಳೆ: ಮುಜುಂಗಾವಿನ ಶ್ರೀ ಭಾರತೀವಿದ್ಯಾಪೀಠದ ಈ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ಪಂದನ (ಬೀಳ್ಕೊಡುಗೆ)ಕಾರ್ಯಕ್ರಮವು ಸೋಮವಾರ ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳೊಂದಿಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್ ರಾವ್ ಮುನ್ನಿಪ್ಪಾಡಿ ವಹಿಸಿ ಜೀವನ ಮೌಲ್ಯಗಳ ಬಗ್ಗೆ ನಾವು ನೀಡಬೇಕಾದ ಮಹತ್ವವನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಅಧ್ಯಾಪಕ ವಿಜಯ ಕಾನ ಮಾತನಾಡಿ ವಿದ್ಯಾರ್ಥಿಗಳ ನಡೆನುಡಿಗಳ ಬಗ್ಗೆ ಸಲಹೆಗಳನ್ನಿತ್ತರು.
ಮುಖ್ಯೋಪಾಧ್ಯಾಯ ಶ್ಯಾಂ ಭಟ್ ದರ್ಭೆಮಾರ್ಗ ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಸ್ಪಂದಿಸಬೇಕು. ನಿಮ್ಮನ್ನು ಕಳುಹಿಸಿ ಕೊಡುವುದಲ್ಲ ಎಂಬ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶವನ್ನು ತಿಳಿಸಿದರು. ಪೂರ್ವ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಿಕ್ಷಕಿ ಚಿತ್ರಾ ಸರಸ್ವತಿ ಶುಭಾಶಂಸನೆಗೈದರು. ವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಜ್ಞಾನದ ಪ್ರತೀಕವಾದ ಉರಿಯುವ ದೀಪಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಯೋಜಿಸಿ, ನಿರೂಪಿಸಿದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಶಾಲೆಗೆ ಈ ಸಂದರ್ಭ ಕೊಡುಗೆಗಳನ್ನು ನೀಡಿದರು.