ಕಾಸರಗೋಡು: ಹಿರಿಯ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕರ ಹುದ್ದೆಗೆ ಶಿಕ್ಷಕರ ಆಯ್ಕೆಗಾಗಿ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಲಯಾಳ ಪ್ರಶ್ನೆಗಳು, ಆಯ್ಕೆ ಉತ್ತರಗಳು ನುಸುಳಿಕೊಂಡ ಪರಿಣಾಮ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸಂಕಷ್ಟ ಎದುರಿಸಬೇಕಾಯಿತು. ಯುಪಿಎಸ್‍ಎ ಕನ್ನಡ ವಿಭಾಗದಲ್ಲಿ ತೆರವಾಗಿದ್ದ ಹುದ್ದೆಗಳಿಗೆ ಶನಿವಾರ ಪರೀಕ್ಷೆ ನಡೆಸಲಾಗಿದ್ದು, ಪ್ರಶ್ನೆಗಳು ಹಾಗೂ ಆಯ್ಕೆ ಉತ್ತರಗಳು ಅಭ್ಯರ್ಥಿಗಳನ್ನು ಸಂದಿಗ್ಧತೆಗೆ ಸಿಲುಕಿಸಿತ್ತು. ಕೆಲವೊಂದು ಪ್ರಶ್ನೆಗಳು ಮಲಯಾಳ ಮಿಶ್ರಿತವಾಗಿರುವುದರಿಂದ ಇಂತಹ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಲಾಗದ ಸ್ಥಿತಿ ಅಭ್ಯರ್ಥಿಗಳಿಗೆ ಎದುರಾಗಿತ್ತು.
ಪಿಎಸ್‍ಸಿ ನಡೆಸುತ್ತಿರುವ ಬಹುತೇಕ ಪರೀಕ್ಷೆಗಳಲ್ಲಿ ಮಲಯಾಳ ನುಸುಳುವಿಕೆ ಸಾಮಾನ್ಯವಾಗಿದ್ದರೂ, ಈ ಬಾರಿಯ ಮನ:ಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆಯಲ್ಲಿ ಬಹುತೇಕ ಪ್ರಶ್ನೆಗಳು ಮಲಯಾಳ ಮಯವಾಗಿತ್ತು ಎಂದು ಅಭ್ಯರ್ಥಿಗಳು ದೂರಿದ್ದಾರೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಮಲಯಾಳ ಹೇರಿಕೆ ಮಾಡುತ್ತಿರುವ ಸರ್ಕಾರ, ಶಿಕ್ಷಕರ ನೇಮಕಾತಿಯಲ್ಲೂ ಇದನ್ನು ಸಾಬೀತುಪಡಿಸಿದೆ. ಯುಪಿ ಶಾಲಾ ಶಿಕ್ಷಕರ(ಕನ್ನಡ ಮಾಧ್ಯಮ)ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಅರಿಯದ ಅಧ್ಯಾಪಕರಿಂದ ತಯಾರಿಸಿ, ಕನ್ನಡಿಗರನ್ನು ಉದ್ಯೋಗದಿಂದ ವಂಚಿತರನ್ನಾಗಿಸುವ ದುರುದ್ದೇಶ ಇದರಲ್ಲಿ ಅಡಕವಾಗಿರುವುದಾಗಿ ಕನ್ನಡಪರ ಸಂಘಟನೆಗಳು ಆರೋಪಿಸಿದೆ.