ಶ್ರೀನಗರ: 'ಇಂಡಿಯಾ' ಕೂಟದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ತಿಳಿಸಿವೆ.
ಶ್ರೀನಗರ: 'ಇಂಡಿಯಾ' ಕೂಟದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ತಿಳಿಸಿವೆ.
ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ವಿಷಯದಲ್ಲಿ ಒಮ್ಮತ ಮೂಡದಿದ್ದರಿಂದ ಎರಡು ಪಕ್ಷಗಳು ಸ್ಪರ್ಧೆ ಮಾಡಲಿವೆ.
ಎನ್‌ಸಿ ವರಿಷ್ಠ ಫಾರೂಕ್ ಅಬ್ದುಲ್ಲಾ ತಮಗೆ ಯಾವುದೇ ಆಯ್ಕೆಯನ್ನು ಬಿಡದೇ ಇರುವುದರಿಂದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷವು (ಪಿಡಿಪಿ) ಕಾಶ್ಮೀರದ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಈಗಾಗಲೇ ಎನ್‌ಸಿ ಎಲ್ಲ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದೆ.
'ಫಾರೂಕ್ ಅಬ್ದುಲ್ಲಾ ನಮ್ಮ ಹಿರಿಯ ನಾಯಕರಾಗಿದ್ದರಿಂದ ಸ್ಥಾನ ಹಂಚಿಕೆಯ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಮುಂಬೈನಲ್ಲಿ ನಡೆದ 'ಇಂಡಿಯಾ' ಕೂಟದ ಸಭೆಯಲ್ಲಿ ನಾನು ಅವರಿಗೆ ಸೂಚಿಸಿದ್ದೆ. ಪಕ್ಷದ ಹಿತಾಸಕ್ತಿ ಬದಿಗಿಟ್ಟು ಅವರು ನ್ಯಾಯ ಸಲ್ಲಿಸುತ್ತಾರೆಂದು ನಾನು ಭಾವಿಸಿದ್ದೆ. ಆದರೆ, ಕಾಶ್ಮೀರದ ಮೂರು ಸ್ಥಾನಗಳಲ್ಲಿಯೂ ಸ್ಪರ್ಧಿಸುವ ಏಕಪಕ್ಷೀಯ ನಿರ್ಧಾರವನ್ನು ಅವರು ಕೈಗೊಂಡರು. ಪಿಡಿಪಿಗೆ ಜನಬೆಂಬಲವಿಲ್ಲ ಮತ್ತು ಪಕ್ಷ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಒಮರ್ ಹೇಳುವ ಮೂಲಕ ನಮಗೆ ಅವಮಾನ ಮಾಡಿದ್ದಾರೆ' ಎಂದು ಮೆಹಬೂಬಾ ಹೇಳಿದರು.