ಕಾಸರಗೋಡು: ಜಿಲ್ಲೆಯಲ್ಲಿ ಉಷ್ಣಾಂಶ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ಸೆಕೆಬೊಕ್ಕೆ ಸೆರಿದಂತೆ ವಿವಿಧ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ. ಅತಿಯದ ಸೆಖೆಗೆ ಹಿರಿಯರಲ್ಲೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಬಿಸಿಲಿಗೆ ಮೈಯೊಡ್ಡಿ ಕೆಲಸ ನಡೆಸುತ್ತಿರುವವರ ದಯನೀಯ ಸ್ಥಿತಿ ಹೇಳತೀರದಾಗಿದೆ.ಜಿಲ್ಲೆಯಲ್ಲಿ ಆಬಾಲ ವೃದ್ಧರಾದಿಯಾಗಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕತೆ ಪಾಲಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಸನ್ಣ ಮಕ್ಕಳನ್ನು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಬಿಸಿಲಿಗೆ ಸಂಚರಿಸದಿರುವಂತೆ ಹೆಚ್ಚವರು ನಿಗಾವಹಿಸುವಂತೆಯೂ ಅಧಿಕಾರಿಗಳು ತಿಳಿಸಿದ್ದಾರೆ. ದಿವಸದಲ್ಲಿ ಎರಡಕ್ಕಿಂತ ಹೆಚ್ಚುಬಾರಿ ಸನಾನ ಮಾಡಿಸುವುದರ ಜತೆಗೆ ಶರೀರ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಮಕ್ಕಳಲ್ಲಿ ಸೆಖೆಬೊಕ್ಕೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವಂತೆಯೂ ಸೂಚಿಸಲಾಗಿದೆ.
ಮೀನಿಗೂ ಕೊರತೆ:
ಏರುತ್ತಿರುವ ಉಷ್ಣಾಂಶದಿಂದ ಸಮುದ್ರದ ನೀರು ಬಿಸಿಯಾಗುತ್ತಿದ್ದು, ಇದರಿಂದ ಮತ್ಸ್ಯ ಸಂಪತ್ತಿನ ಲಭ್ಯತೆಯಲ್ಲೂ ಕೊರತೆಯುಂಟಾಗಿದೆ. ಜನಸಾಮಾನ್ಯರು ಹೆಚ್ಚಾಗಿ ಖರೀದಿ ಮಾಡುವ ಬೂತಾಯಿ, ಬಂಗುಡೆ ಮೀನಿನ ತೀವ್ರ ಕೊರತೆ ಎದುರಾಗಿದೆ. ಕಾಸರಗೋಡಿನ ಮೀನಿನ ಮಾರುಕಟ್ಟೆಯಲ್ಲಿ ಮೀನು ಅಲಭ್ಯತೆಯಿಂದ ಬಿಕೋ ಎನ್ನುತ್ತಿದೆ. ಸಮುದ್ರದಲ್ಲಿ ಮೀನಿನ ಕೊರತೆಯಿಂದ ಸಣ್ಣಪುಟ್ಟ ಮೀನುಗಾರರು ತಮ್ಮ ದೋಣಿಗಳೊಂದಿಗೆ ಸಮುದ್ರಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸೀಮೆ ಎಣ್ಣೆ ಚಾಲಿತ ಸಣ್ಣ ದೋಣಿಗಳಲ್ಲಿ ಮೀನುಗಾರಿಕೆ ನಡೆಸಲು ಕನಿಷ್ಠ 2ಸಾವಿರ ರೂ. ಮೊತ್ತದ ಇಂಧನ ಬಳಸಬೇಕಾಗುತ್ತಿದೆ. ಸಮುದ್ರಕ್ಕಿಳಿದು ವಾಪಸಾಗುವಾಗ ಎರಡು ಸಾವಿರ ರೂ. ಮೌಲ್ಯದ ಮೀನು ಲಭಿಸುವುದೂ ಕಷ್ಟಕರವಾಗಿದೆ ಎಂಬುದಾಗಿ ಕಸಬಾ ಕಡಪ್ಪುರ ನಿವಾಸಿ, ಮೀನುಕಾರ್ಮಿಕ ಸತೀಶನ್ ತಿಳಿಸುತ್ತಾರೆ. ಇನ್ನು ದೊಡ್ಡ ಬೋಟುಗಳಲ್ಲಿ ಮೀನು ಹಿಡಿಯಲು ತೆರಳಬೇಕಾದರೆ, 5ರಿಂದ ಎಂಟು ಸಾವಿರ ರೂ. ಮೊತ್ತದ ಇಂಧನ ಬಳಸಬೇಕಾಗುತ್ತಿದ್ದು, ಕೆಲವೊಮ್ಮೆ ಬರಿಗೈಯಲ್ಲಿ ವಾಪಸಾಗಬೇಕಾಗುತ್ತದೆ ಎಂಬುದಾಗಿ ಮೀನುಗಾರರು ಅಳಲು ವ್ಯಕ್ತಪಡಿಸುತ್ತಾರೆ.
ಮುಂಜಾಗ್ರತಾ ಕ್ರಮಕ್ಕೆ ಸೂಚನೆ:
ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ದೀರ್ಘಕಾಲದ ತನಕ ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು ಜತೆಗೆ ಸಾಕಷ್ಟು ದ್ರವಾಹಾರ ಸೇವಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವುದು, ಹಗಲಿನಲ್ಲಿ ಆಲ್ಕೋಹಾಲ್, ಕಾಫಿ, ಟೀ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳಂತಹ ನಿರ್ಜಲೀಕರಣ ಪಾನೀಯಗಳನ್ನು ವರ್ಜಿಸುವುದು, ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವುದು, ಹೊರಗೆ ಹೋಗುವಾಗ ಪಾದರಕ್ಷೆಗಳನ್ನು ಧರಿಸುವುದರ ಜತೆಗೆ ಕೊಡೆ ಅಥವಾ ಟೋಪಿ ಬಳಸುವುದು, ಸಾಕಷ್ಟು ಪ್ರಮಾಣದಲ್ಲಿ ಹಣ್ಣು, ತರಕಾರಿ ಸೇವಿಸುವಂತೆ ಸೂಚಿಸಲಾಗಿದೆ. ಮಾರುಕಟ್ಟೆ, ನಿರ್ಮಾಣಹಂತದ ಕಟ್ಟಡಗಳು, ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಲ್ಲಿ (ಡಂಪಿಂಗ್ ಯಾರ್ಡ್) ಏಕಾಏಕಿ ಬೆಂಕಿ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಮುಂಜಾಗ್ರತೆ ವಹಿಸುವುದರ ಜತೆಗೆ ಅಗ್ನಿಶಾಮಕ ತಪಾಸಣೆ ನಡೆಸುವಂತೆಯೂ ಸೂಚಿಸಲಾಗಿದೆ.